ಅಲ್ಲಿ ನಡೆದದ್ದು ರೀಲ್ ಅಲ್ಲ ರಿಯಲ್. ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಿತ್ರ ‘ಬಲಗಂ’ ನಲ್ಲಿನ ಜನಪ್ರಿಯ ದೃಶ್ಯದಂತಹ ಸನ್ನಿವೇಶವು ಮದುವೆ ಮನೆಯಲ್ಲಿ ಕಾಣಿಸಿಕೊಂಡಿತು. ನಂತರ ವಧು ಮತ್ತು ವರನ ಕುಟುಂಬದವರು ಮದುವೆಯನ್ನೇ ರದ್ದುಗೊಳಿಸಿದರು. ಅಷ್ಟಕ್ಕೂ ಅಲ್ಲಾಗಿದ್ದೇನು ಅಂತ ತಿಳಿದರೆ, ಬಲಗಂ ಚಲನಚಿತ್ರದ ದೃಶ್ಯವೊಂದರಲ್ಲಿ ಮಟನ್‌ನಲ್ಲಿ ಮೂಳೆ ಇರಲಿಲ್ಲವೆಂದು ವರ ಮತ್ತು ವಧುವಿನ ಕುಟುಂಬದ ನಡುವೆ ಜಗಳವಾಗಿ ಮದುವೆ ರದ್ದಾಗುತ್ತದೆ.
ಅದೇ ರೀತಿಯ ಘಟನೆ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಜಗ್ತಿಯಾಲ್ ಜಿಲ್ಲೆಯ ವರನೊಂದಿಗೆ ವಧುವಿನ ಕುಟುಂಬದವರು ವಿವಾಹವನ್ನು ನಿಶ್ಚಯಿಸಿ ವಧುವಿನ ನಿವಾಸದಲ್ಲಿ ಮದುವೆ ನಡೆಸಿದ್ದರು. ಮದುವೆಯನ್ನು ಸಾಂಪ್ರದಾಯಿಕವಾಗಿ ಮತ್ತು ಅದ್ದೂರಿಯಾಗಿ ನಡೆಸಲು ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದವು. ಮದುವೆಯಲ್ಲಿ ವಧುವಿನ ಕುಟುಂಬವು ಮದುಮಗನ ಕುಟುಂಬ ಸದಸ್ಯರು ಮತ್ತು ಬಂಧುಗಳಿಗೆ ಮಾಂಸಾಹಾರಿ ಊಟವನ್ನು ಏರ್ಪಡಿಸಿದರು.
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಅತಿಥಿಗಳು ಮಾಂಸಾಹಾರಿ ಊಟದಲ್ಲಿ ಮಟನ್‌ನ ಮೂಳೆ ನೀಡಿಲ್ಲ ಎಂದು ಆರೋಪಿಸಿದರು. ಇದಕ್ಕೆ ವಧುವಿನ ಕಡೆಯವರು ತಾವು ಮೂಳೆ ಸೇರಿಸಿಲ್ಲ ಎಂದು ಸ್ಪಷ್ಟೀಕರಿಸಿದರು. ಇದರಿಂದಾಗಿ ಎರಡೂ ಕುಟುಂಬದ ನಡುವೆ ಜಗಳ ಶುರುವಾಯಿತು.
ತಕ್ಷಣ ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸ್ ಅಧಿಕಾರಿಗಳು ವರನ ಕುಟುಂಬಸ್ಥರ ಮನವೊಲಿಕೆಗೆ ಮುಂದಾದಾಗ ವಧುವಿನ ಮನೆಯವರು ಮಾಂಸಾಹಾರಿ ಖಾದ್ಯಗಳಲ್ಲಿ ಮೂಳೆ ಬಡಿಸದೆ ಅವಮಾನ ಮಾಡಿದ್ದಾರೆ ಎಂದು ವರನ ಕಡೆಯವರು ವಾದಿಸಿದರು.
ವಧುವಿನ ಮನೆಯವರು ಸಹ ಈ ಬಗ್ಗೆ ತಮಗೆ ಮೊದಲೇ ತಿಳಿಸಿರಲಿಲ್ಲ, ಇದರಿಂದಾಗಿ ಮೂಳೆಯನ್ನು ಊಟಕ್ಕೆ ಸೇರಿಸಿರಲಿಲ್ಲ ಎಂದು ವಾದಿಸಿದರು.
ಕೊನೆಗೆ ಎರಡೂ ಕಡೆಯವರು ಮದುವೆ ರದ್ದುಗೊಳಿಸಿ ತಮ್ಮ ತಮ್ಮ ಊರುಗಳಿಗೆ ತೆರಳಿದರು. ಮದುವೆ ರದ್ದತಿಗೆ ಕಾರಣವಾದ ವಿಚಾರ ತಿಳಿದು ಪೊಲೀಸರು ಹಾಗೂ ಸ್ಥಳೀಯರು ಆಶ್ಚರ್ಯಚಕಿತರಾದರು.