ನವದೆಹಲಿ: ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಶನಿವಾರ ಇಂಡಿಗೋ ವಿಮಾನ 6E7261 ನಲ್ಲಿ ಚಂಡೀಗಢದಿಂದ ಜೈಪುರಕ್ಕೆ ಪ್ರಯಾಣಿಸುವಾಗ ಅತ್ಯಂತ ಭಯಾನಕ ಅನುಭವ ಆಗಿದೆ ಎಂದು ಹೇಳಿದ್ದಾರೆ.
ಹವಾನಿಯಂತ್ರಣವಿಲ್ಲದೆ ವಿಮಾನದೊಳಗೆ ಕುಳಿತುಕೊಳ್ಳುವಂತೆ ಮಾಡಿದ್ದು, ಪ್ರಯಾಣಿಕರಿಗೆ 90 ನಿಮಿಷಗಳ ಅನುಭವ ಭಯಾನಕ ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ದೂರಿದ ಅವರು, ಮೊದಲು ಪ್ರಯಾಣಿಕರನ್ನು ಬಿಸಿಲಿನ ತಾಪದಲ್ಲಿ ಸುಮಾರು 10-15 ನಿಮಿಷಗಳ ಕಾಲ ಸರದಿಯಲ್ಲಿ ಕಾಯುವಂತೆ ಮಾಡಲಾಯಿತು. ನಂತರ ಎಸಿಗಳು ಆನ್ ಮಾಡದೆಯೇ ವಿಮಾನ ಟೇಕ್ ಆಫ್ ಆಯಿತು ಎಂದು ಹೇಳಿದ್ದಾರೆ.
ಟೇಕ್ ಆಫ್ ನಿಂದ ಲ್ಯಾಂಡಿಂಗ್ವರೆಗೆ, AC ಗಳು ಆಫ್ ಆಗಿದ್ದವು. ಎಲ್ಲಾ ಪ್ರಯಾಣಿಕರು ಪ್ರಯಾಣದ ಉದ್ದಕ್ಕೂ ಬಳಲಿದ್ದಾರೆ. ಗಗನಸಖಿಯರು ತಮ್ಮ ಬೆವರು ಒರೆಸಲು ‘ಉದಾರವಾಗಿ’ ಟಿಶ್ಯೂ ಪೇಪರ್ಗಳನ್ನು ಪ್ರಯಾಣಿಕರಿಗೆ ವಿತರಿಸಿದರು ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿಡಿಯೊದಲ್ಲಿ ಪ್ರಯಾಣಿಕರು ಟಿಶ್ಯೂಗಳು ಮತ್ತು ಪೇಪರ್ಗಳೊಂದಿಗೆ ಗಾಳಿ ಬೀಸಿಕೊಳ್ಳವುದನ್ನು ಕಾಣಬಹುದು. ಅವರು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) ಕ್ಕೆ ಟ್ವೀಟ್ ಟ್ಯಾಗ್ ಮಾಡಿ ವಿಮಾನಯಾನ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.