ನವದೆಹಲಿ: ನಕಲಿ ವೈದ್ಯರ ಹಾವಳಿ ತಡೆಗೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ದೇಶದ ಎಲ್ಲಾ ವೈದ್ಯರನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ನೋಂದಣಿ ಮಾಡಿಕೊಂಡು ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಎಲ್ಲಾ ವೈದ್ಯರು ರಾಷ್ಟ್ರೀಯ ವೈದ್ಯ ಆಯೋಗದಲ್ಲಿ ಹೆಸರು ದಾಖಲಿಸಬೇಕು. ವೈದ್ಯರ ಅರ್ಹತೆ ಸೇರಿದಂತೆ ಎಲ್ಲಾ ದತ್ತಾಂಶಗಳು ಜನತೆಗೆ ಲಭ್ಯವಾಗುತ್ತದೆ. ಎಲ್ಲಾ ವೈದ್ಯರು ರಾಜ್ಯ ವೈದ್ಯಕೀಯ ಮಂಡಳಿಗಳ ಜೊತೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ಕೂಡ ಹೆಸರು ನೋಂದಾಯಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದ್ದು, ವೈದ್ಯಕೀಯ ವೃತ್ತಿ ಕೈಗೊಳ್ಳಲು ವಿಶಿಷ್ಟ ಗುರುತಿನ ಸಂಖ್ಯೆ ಪಡೆಯಬೇಕೆಂದು ಸೂಚನೆ ನೀಡಿದೆ.
ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್ ನಲ್ಲಿ ವೈದ್ಯರ ಹೆಸರು, ನೋಂದಣಿ ದತ್ತಾಂಶ ಸ್ವೀಕರಿಸಿ ಇಡಲಾಗುವುದು. ಇದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ವೈದ್ಯರ ಹೆಸರು, ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಕೆಲಸದ ಸ್ಥಳ, ಆಸ್ಪತ್ರೆ, ಸಂಸ್ಥೆಯ ಹೆಸರು, ವೈದ್ಯಕೀಯ ಅರ್ಹತೆ, ಹೆಚ್ಚುವರಿ ವೈದ್ಯಕೀಯ ಅರ್ಹತೆ, ವಿಶೇಷತೆ ಮತ್ತು ವಿದ್ಯಾಭ್ಯಾಸ ಮಾಡಿದ ಸಂಸ್ಥೆ ಅಥವಾ ವಿವಿ ಹೆಸರು ಸೇರಿದಂತೆ ವೈದ್ಯರಿಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಪ್ರದರ್ಶಿಸಲಾಗುವುದು.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆ ಅಡಿಯಲ್ಲಿ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆದ ಮತ್ತು ಕಾಯಿದೆಯ ಸೆಕ್ಷನ್ 15ರ ಅಡಿಯಲ್ಲಿ ನಡೆದ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ ನಲ್ಲಿ ಅರ್ಹತೆ ಪಡೆದ ಯಾವುದೇ ವ್ಯಕ್ತಿ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ನೋಂದಣಿಗೆ ಅರ್ಹರಾಗಿರುತ್ತಾರೆ. ವಿದೇಶಿ ವೈದ್ಯಕೀಯ ಶಿಕ್ಷಣ ಪಡೆದವರು ಕಾಯ್ದೆಯ ಸೆಕ್ಷನ್ 15ರ ಅಡಿಯಲ್ಲಿ ನಡೆಯುವ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ ನಲ್ಲಿ ಅರ್ಹತೆ ಪಡೆದವರು ಕೂಡ ನೋಂದಣಿಗೆ ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.