ನವದೆಹಲಿ: ವೈದ್ಯರು ರೋಗಿಗಳಿಗೆ ಬ್ರಾಂಡೆಡ್ ಔಷಧಗಳ ಬದಲಾಗಿ ಜೆನೆರಿಕ್ ಔಷಧಗಳನ್ನು ಶಿಫಾರಸು ಮಾಡಬೇಕು ಎಂದು ಹೊರಡಿಸಲಾಗಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ತಡೆ ಹಿಡಿದಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ನೋಂದಾಯಿತ ವೈದ್ಯರು ನಿಯಮಗಳ ಅನ್ವಯ ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕೆಂದು ಕಡ್ಡಾಯಗೊಳಿಸಲಾಗಿತ್ತು
ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ವಿರೋಧ ವ್ಯಕ್ತಪಡಿಸಿತ್ತು. ಜೆನೆರಿಕ್ ಔಷಧಗಳ ಗುಣಮಟ್ಟ ಉತ್ತಮವಾಗಿಲ್ಲ, ಇದರಿಂದ ರೋಗಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂಬ ಆಕ್ಷೇಪ ವೈದ್ಯರಿಂದ ಕೇಳಿ ಬಂದಿತ್ತು.
ಕೇಂದ್ರ ಸಚಿವ ಮನ್ ಸುಖ್ ಮಾಂಡವೀಯಾ ಅವರನ್ನು ಐಎಂಎ ಮತ್ತು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಶಿಯೇಷನ್ ಸದಸ್ಯರು ಭೇಟಿ ಮಾಡಿ ಈ ಕುರಿತಾಗಿ ಚರ್ಚೆ ನಡೆಸಿದ್ದು, ಇದರ ಬೆನ್ನಲ್ಲೇ ವೈದ್ಯರು ರೋಗಿಗಳಿಗೆ ಬ್ರಾಂಡೆಡ್ ಔಷಧಿಗಳ ಬದಲಿಗೆ ಜೆನೆರಿಕ್ ಔಷಧಗಳನ್ನು ಶಿಫಾರಸು ಮಾಡಬೇಕು ಎಂದು ಹೊರಡಿಸಿದ್ದ ಆದೇಶವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ತಡೆ ಹಿಡಿದಿದೆ.