ಚೆನ್ನೈ: ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಚೆನ್ನೈ ಮಹಾನಗರದಲ್ಲಿ ಮಳೆ ಆರ್ಭಟಿಸುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ತಮಿಳುನಾಡು ಸರ್ಕಾರದಿಂದ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ. ಈ ಮೊದಲು ಅಗತ್ಯ ಅಂಗಡಿಗಳ ಓಪನ್ ಗೆ ಅನುಮತಿ ನೀಡಲಾಗಿತ್ತು. ಆದರೆ, ಭಾರೀ ಮಳೆಯ ಆರ್ಭಟದ ಕಾರಣ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ.
ಮಹಾನಗರದಲ್ಲಿ ಭಾರೀ ಮಳೆಯ ಕಾರಣ ಮನೆಗೆ ಹಿಂದಿರುಗಲು ಸಾಧ್ಯವಾಗದೇ ವ್ಯಾಪಾರಿಗಳು ಪರದಾಟ ನಡೆಸಿದ್ದಾರೆ. ಚೆನ್ನೈ ಮಹಾನಗರದ ಮೂರು ಬಂದರುಗಳನ್ನು ಬಂದ್ ಮಾಡಲಾಗಿದ್ದು, ವಿಮಾನ ನಿಲ್ದಾಣವನ್ನು ಕೂಡ ಬಂದ್ ಮಾಡಲಾಗಿದೆ. ಭಾರಿ ವೇಗದ ಗಾಳಿ ಜೊತೆಗೆ ಮಳೆಯಾಗುತ್ತಿರುವ ಕಾರಣ ಜನ ತತ್ತರಿಸಿಹೋಗಿದ್ದಾರೆ. ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.
ಕರ್ನಾಟಕದ ದಕ್ಷಿಣ ಭಾಗ, ತಮಿಳುನಾಡು, ಆಂಧ್ರಪ್ರದೇಶ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಬಹುದು ಹೇಳಲಾಗಿದೆ. 130 ರಿಂದ 140 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಅಲ್ಲದೇ, ಸಮುದ್ರದಲ್ಲಿ ಎರಡು ಮೀಟರ್ ಎತ್ತರದ ಅಲೆ ಏಳುವ ಸಾಧ್ಯತೆ ಇದೆ. ನಾಲ್ಕು ರಾಜ್ಯಗಳಲ್ಲಿ 50 ಎನ್.ಡಿ.ಆರ್.ಎಫ್. ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ತಮಿಳುನಾಡಿನಲ್ಲಿ ಸರ್ಕಾರಿ ರಜೆ ಘೋಷಿಸಿದ್ದು, ಪುದುಚೇರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಲವೆಡೆ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ನಿವಾರ್ ಚಂಡಮಾರುತ ಮಧ್ಯಾಹ್ನದೊಳಗೆ ತಮಿಳುನಾಡು ತೀರಕ್ಕೆ ಅಪ್ಪಳಿಸಲಿದೆ.