
ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸ್ವಯಂ ಘೋಷಿತ ದೇವಮಾನವ, ಆಧ್ಯಾತ್ಮಗುರು ನಿತ್ಯಾನಂದ ಸ್ವಾಮಿ ನಿಧನರಾಗಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗಿದೆ. ಭಾರತದಿಂದ ಪಲಾಯನಗೈದು ತನ್ನದೇ ಆದ ಯುನೈಟೆಡ್ ಸ್ಟೇಟ್ ಆಫ್ ಕೈಲಾಸ ಎಂಬ ಹೊಸ ರಾಷ್ಟ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿ, ಭೂ ವಿವಾದಗಳಿಂದಲೂ ಸುದ್ದಿಯಾಗಿರುವ ನಿತ್ಯಾನಂದ ಸ್ವಾಮಿ ಏಕಾಏಕಿ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ನಿತ್ಯಾನಂದ ಸ್ವಾಮಿ ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ ಎಂದು ಅವರ ಸೋದರಳಿಯ ಸುಂದರೇಶ್ವರನ್ ವಿಡಿಯೋವೊಂದರಲ್ಲಿ ಬಹಿರಂಗಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನಿತ್ಯಾನಂದ ಅವರು ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮಕ್ಕಾಗಿ ಶ್ರಮಿಸಿದ್ದರು. ಆಧ್ಯಾತ್ಮಿಕ ಸಂದೇಶಗಳಿಂದ ಅನೇಕ ಭಕ್ತರ ಮೆಚ್ಚುಗೆ ಗಳಿಸಿದ್ದರು. ಇಂದು ಅವರು ನಮ್ಮನ್ನು ಅಗಲಿದ್ದಾರೆ ಎಂದು ಸುಂದರೇಶ್ವರನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ನಿತ್ಯಾನಂದ ಸ್ವಾಮಿ ಸಾವಿನ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಕೆಲ ದಿನಗಳ ಹಿಂದೆ ಸ್ವಯಂ ಘೋಷಿತ ಆಧ್ಯಾತ್ಮ ಗುರು ನಿತ್ಯಾನಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಾದ ಕೆಲವೇ ದಿನಗಳಲ್ಲಿ ನಿತ್ಯಾನಂದ ವಿಡಿಯೋ ಮೂಲಕ ಉಪನ್ಯಾಸಗಳನ್ನು ನೀಡುತ್ತಾ, ವದಂತಿಗಳಿಗೆ ತೆರೆ ಎಳೆದಿದ್ದರು. ಈಗ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಹರಡಿದೆ. ತನ್ನ ವಿರುದ್ಧದ ವಿವಾದ, ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಇಂತದ್ದೊಂದು ಸುಳ್ಳು ಮಾಹಿತಿ ಅವರೇ ಹರಡಿರಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ನಿತ್ಯಾನಂದ ಸಾವಿನ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದು, ಸತ್ಯಾಸತ್ಯತೆ, ಖಚಿತ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.