ಬೆಂಗಳೂರು: ವಿಧಾನ ಪರಿಷತ್ ನಲ್ಲಿ ‘ನಿತ್ಯ ಸುಮಂಗಲಿ’ ಪದ ಗದ್ದಲಕ್ಕೆ ಕಾರಣವಾಗಿದೆ. ತಮ್ಮ ಭಾಷಣದ ವೇಳೆ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ನಿತ್ಯ ಸುಮಂಗಲಿ ಪದ ಬಳಸಿದ್ದಾರೆ.
ವಕ್ಫ್ ಮಂಡಳಿಯಲ್ಲಿ ಅಕ್ರಮ ನಡೆದ ಬಗ್ಗೆ ನಿನ್ನೆ ಆರೋಪ ಕೇಳಿ ಬಂದಿದೆ. ದಲಿತರ ಹಣದಲ್ಲೂ ಅಕ್ರಮ ನಡೆದಿದೆ. ಹಿಂದುಳಿದ ವರ್ಗದ ಹಣ ಕೂಡ ಲೂಟಿಯಾಗಿದೆ ಎಂದು ಹೇಳಿದ್ದಾರೆ. ಹೀಗೆ ಮಾತನಾಡುವ ವೇಳೆ ಅವರು ಕೆಲವರು ಅಧಿಕಾರ ಇರುವ ಕಡೆ ಹೋಗುತ್ತಾರೆ. ಅವರು ನಿತ್ಯ ಸುಮಂಗಲಿಯರ ರೀತಿ ಅಧಿಕಾರದ ಕಡೆ ಹೋಗುತ್ತಾರೆ ಎಂದಿದ್ದಾರೆ.
ಸಿ.ಟಿ. ರವಿ ನಿತ್ಯ ಸುಮಂಗಲಿ ಪದ ಬಳಸಿದಾಗ ಸದಸ್ಯರಾದ ಉಮಾಶ್ರೀ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿತ್ಯ ಸುಮಂಗಲಿ ಎನ್ನುವುದು ಸರಿಯಲ್ಲವೆಂದು ಹೇಳಿದ್ದಾರೆ. ಇದು ರವಿಯವರ ಮನಸ್ಥಿತಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ನೀವು ಅಂತಹ ಪದಗಳನ್ನು ಬಳಸಬಾರದು. ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ. ಅದಕ್ಕೆ ಸಿ.ಟಿ. ರವಿ ಇದು ಅಸಂವಿಧಾನಿಕ ಪದವಲ್ಲ, ಸುಮಂಗಲಿ ಎಂದರೆ ಗೌರವದ ಸಂಕೇತ. ಹಿಂದಿನಿಂದಲೂ ಇದೆ ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.