ಪಾಟ್ನಾ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಟಿಎಂಸಿ ಅಧ್ಯಕ್ಷ ಮಮತಾ ಬ್ಯಾನರ್ಜಿ, ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಶಿಫಾರಸು ಮಾಡಿದ್ದು, ಇದರಿಂದ ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿತ್ತು.
ಆದರೆ, ಮೌನ ಮುರಿದ ನಿತೀಶ್ ಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿಗೆ ನನ್ನ ತಕರಾರು ಇಲ್ಲ. ಖರ್ಗೆ ಅವರ ಹೆಸರನ್ನು ಶಿಫಾರಸು ಮಾಡಿರುವುದಕ್ಕೆ ನನಗೆ ಯಾವುದೇ ಅಸಮಾಧಾನವೂ ಇಲ್ಲ. ನಾನು ಇಂಡಿಯಾ ಮೈತ್ರಿಕೂಟದ ಸಂಚಾಲಕ ಹುದ್ದೆ ಪಡೆಯುವ ಆಸೆಯನ್ನು ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಾರೆ.
ಖರ್ಗೆಯವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಶಿಫಾರಸು ಮಾಡಿರುವುದಕ್ಕೆ ನನಗೆ ಯಾವುದೇ ಬೇಸರ ಆಗಿಲ್ಲ. ನನಗೆ ಆಸಕ್ತಿಯೂ ಇಲ್ಲ. ಪ್ರಧಾನಿ ಅಭ್ಯರ್ಥಿ ವಿಷಯ ಚರ್ಚೆಗೆ ಬಂದಾಗ ನನಗೆ ಆಸಕ್ತಿ ಇಲ್ಲ ಎಂದು ಹೇಳಿದೆ. ಆಗ ಖರ್ಗೆಯವರ ಹೆಸರು ಬಂತು. ಅದಕ್ಕೆ ನನ್ನ ಸಹಮತವಿದೆ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.