ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಕಳಪೆ ಪ್ರದರ್ಶನದ ನಂತರ ಚುನಾವಣಾ ಪಂಡಿತರು ‘ಕಿಂಗ್ ಮೇಕರ್ಸ್’ ಎಂದು ಕರೆಯುತ್ತಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಕೇಂದ್ರದಲ್ಲಿ ತಮ್ಮ ಮೂರನೇ ಸರ್ಕಾರವನ್ನು ರಚಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳನ್ನು ಬೆಂಬಲಿಸುವ ಬಗ್ಗೆ ದೊಡ್ಡ ಸುಳಿವುಗಳನ್ನು ನೀಡಿದ್ದಾರೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಭೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ಆಗಮಿಸಿದ ನಿತೀಶ್ ಕುಮಾರ್, ಸರ್ಕಾರ ರಚಿಸಲಾಗುವುದು ಎಂದು ಹೇಳಿದರು. “ಸರ್ಕಾರ್ ತೋ ಅಬ್ ಬನೇಗಿ ಹೈ” ಎಂದು ಅವರು ಹಿಂದಿಯಲ್ಲಿ ಹೇಳಿದರು.
ಈ ವೇಳೆ ಇಬ್ಬರು ನಾಯಕರು ಎನ್ಡಿಎ ಮುಂದೆ ತಮ್ಮದೇ ಆದ ಬೇಡಿಕೆಗಳನ್ನು ಇಟ್ಟಿದ್ದಾರೆ. ಜೊತೆಗೆ ತಮ್ಮ ಪಕ್ಷಕ್ಕೆ ಮೂರರಿಂದ ನಾಲ್ಕು ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. 2018ರಲ್ಲಿ ಆಂಧ್ರ ಪ್ರದೇಶಕ್ಕೆ ಹಣಕಾಸಿನ ನೆರವು ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ಎನ್ಡಿಎಯನ್ನು ತೊರೆದಿದ್ದರು. ಆಂಧ್ರ ಪ್ರದೇಶಕ್ಕೆ 371ನೇ ವಿಧಿ ಮೂಲಕ ವಿಶೇಷ ಸ್ಥಾನಮಾನ ನೀಡಬೇಕು ಎಂಬುದು ಅವರ ಬಹಳ ದಿನದ ಬೇಡಿಕೆಯಾಗಿತ್ತು, ಅದೇ ಬೇಡಿಕೆಯನ್ನು ಎನ್ಡಿಎ ಮುಂದೆ ಚಂದ್ರಬಾಬು ನಾಯ್ಡು ಇಟ್ಟಿದ್ದಾರೆ ಎನ್ನಲಾಗಿದೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಎನ್ಡಿಎದಲ್ಲಿಯೇ ಉಳಿಯಲು ಮೋದಿ ಕ್ಯಾಬಿನೆಟ್ನಲ್ಲಿ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಕ್ಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್ಡಿಎನಲ್ಲಿ ಉಪ ಪ್ರಧಾನಿ ಪಟ್ಟವನ್ನು ನಿತೀಶ್ ಕುಮಾರ್ ಅವರಿಗೆ ನೀಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ದೆಹಲಿಗೆ ತೆರಳುವ ಮೊದಲು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಜೊತೆಗಿರುವುದಾಗಿ ಹೇಳಿದರು. “ನೀವು ಯಾವಾಗಲೂ ಸುದ್ದಿಗಳನ್ನು ಬಯಸುತ್ತೀರಿ. ನಾನು ಅನುಭವಿ ಮತ್ತು ಈ ದೇಶದಲ್ಲಿ ಹಲವಾರು ರಾಜಕೀಯ ಬದಲಾವಣೆಗಳನ್ನು ನೋಡಿದ್ದೇನೆ. ನಾವು ಎನ್ಡಿಎಯಲ್ಲಿದ್ದೇವೆ, ನಾನು ಎನ್ಡಿಎ ಸಭೆಗೆ ಹೋಗುತ್ತಿದ್ದೇನೆ. ಕಾಲಕ್ರಮೇಣ ನಾವು ಅದನ್ನು ವರದಿ ಮಾಡುತ್ತೇವೆ” ಎಂದು ಚಂದ್ರಬಾಬು ನಾಯ್ಡು ಸುದ್ದಿಗಾರರಿಗೆ ತಿಳಿಸಿದರು.