ಪಾಟ್ನಾ: ಸಿಎಂ ಹುದ್ದೆಗೆ ಎನ್.ಡಿ.ಎ. ಮೈತ್ರಿಕೂಟದಿಂದ ಆಯ್ಕೆಯಾಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಸತತ ನಾಲ್ಕನೇ ಅವಧಿಗೆ ಮತ್ತು 7 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಎನ್.ಡಿ.ಎ. ಶಾಸಕಾಂಗ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಎನ್.ಡಿ.ಎ. ಮೈತ್ರಿಕೂಟ 125 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆಗೆ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಲಾಗಿದೆ.
ಜೆಡಿಯು 43, ಬಿಜೆಪಿ 71 ಶಾಸಕರನ್ನು ಹೊಂದಿದ್ದು, ಬಿಜೆಪಿಗೆ ಹೆಚ್ಚು ಸಚಿವ ಸ್ಥಾನ ಸಿಗಲಿದೆ. ಕಳೆದ ಅವಧಿಯಲ್ಲಿ ಸಿಎಂ ನಿತೀಶ್ ಕುಮಾರ್ ಸೇರಿ ಜೆಡಿಯುನಿಂದ 18 ಮಂದಿ ಹಾಗೂ ಬಿಜೆಪಿಯಿಂದ 12 ಮಂದಿ ಸಚಿವರಿದ್ದರು. ಕಳೆದ ಸಲ ಜೆಡಿಯು 71 ಸ್ಥಾನ, ಬಿಜೆಪಿ 53 ಸ್ಥಾನ ಗಳಿಸಿದ್ದು, ಈ ಬಾರಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿರುವುದರಿಂದ ಹೆಚ್ಚಿನ ಸ್ಥಾನ ಪಡೆದುಕೊಳ್ಳಲು ಮುಂದಾಗಿದೆ.
ಬಿಹಾರ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರನ್ನು ರಾಷ್ಟ್ರರಾಜಕಾರಣಕ್ಕೆ ಕರೆಸಿಕೊಂಡು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗುವುದು. ಶಾಸಕಾಂಗ ಪಕ್ಷದ ನಾಯಕರಾಗಿ ತಾರಿಕೇಶ್ವರ್ ಪ್ರಸಾದ್ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.