ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಪರಿಶೀಲನೆ ನಡೆಸಲಾಗಿದೆ.
ಜೈಲಲ್ಲಿರುವ ಕೈದಿಯಿಂದಲೇ ಜೀವ ಬೆದರಿಕೆ ಕರೆ ಬಂದಿದ್ದು, ನಿನ್ನೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಿಂಡಲಗಾ ಜೈಲಿಗೆ ಬಂದು ಪೊಲೀಸರು ಆರೋಪಿ ವಿಚಾರಣೆ ನಡೆಸಿದ್ದು, ನಾಗಪುರ ಪೊಲೀಸರಿಗೆ ಕೊಲ್ಲಾಪುರ, ಸಾಂಗ್ಲಿ, ಬೆಳಗಾವಿ ಪೊಲೀಸರು ಸಾಥ್ ನೀಡಿದ್ದಾರೆ.
ನಿನ್ನೆ ಸಂಜೆ 3 ಗಂಟೆಗಳ ಕಾಲ ಜೈಲಿನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಂಗಳೂರು ಕೈದಿಯಿಂದಲೇ ಕರೆ ಮಾಡಲಾಗಿದೆ. ಬೆಳಗಾವಿ ನಗರದ ಆರೋಪಿಯ ಮೊಬೈಲ್ ಅನ್ನು ತನ್ನ ಪತ್ನಿಗೆ ಕರೆ ಮಾಡುವುದಾಗಿ ಹೇಳಿ ಪಡೆದುಕೊಂಡಿದ್ದ ಆರೋಪಿ ಬೆದರಿಕೆ ಕರೆ ಮಾಡಿದ್ದಾನೆ.
ಮಹಾರಾಷ್ಟ್ರ ಹಾಗೂ ಬೆಳಗಾವಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಂದು ಜೈಲಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆ ಇದೆ. ಈ ಹಿಂದೆ ಅಲೋಕ್ ಕುಮಾರ್ ಅವರಿಗೆ ಕೈದಿಗಳು ಜೀವ ಬೆದರಿಕೆ ಹಾಕಿದ್ದರು. ಹಲವು ಬಾರಿ ದಾಳಿ ನಡೆದರೂ ಜೈಲಿನಲ್ಲಿ ಮೊಬೈಲ್ ಬಳಕೆ ನಿಲ್ಲುತ್ತಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಜೈಲಿಗೆ ಭೇಟಿ ನೀಡಿದ್ದರು.
ಕರ್ನಾಟಕದ ಬೆಳಗಾವಿಯಲ್ಲಿ ಜೈಲಿನಲ್ಲಿರುವ ವ್ಯಕ್ತಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಕರೆ ಮಾಡಿದವರನ್ನು ಕುಖ್ಯಾತ ದರೋಡೆಕೋರ ಮತ್ತು ಕೊಲೆ ಆರೋಪಿ ಜಯೇಶ್ ಪೂಜಾರಿ ಎಂದು ಗುರುತಿಸಲಾಗಿದ್ದು, ಜೈಲಿನೊಳಗೆ ಅಕ್ರಮವಾಗಿ ಫೋನ್ ಬಳಸಿ ಗಡ್ಕರಿ ಕಚೇರಿಗೆ ಬೆದರಿಕೆ ಹಾಕಿದ್ದಾನೆ ಎಂದು ನಾಗ್ಪುರದ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.