ನವದೆಹಲಿ: ರಸ್ತೆ ಸುರಕ್ಷತೆ ಪರಿಸರ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಂತಹ ಎಲ್ಲಾ ರೀತಿಯ ಸುಧಾರಿತ ತಂತ್ರಜ್ಞಾನಗಳನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಟ್ರಾಫಿಕ್ ಇನ್ಫ್ರಾಟೆಕ್ ಎಕ್ಸ್ ಪೋ 12ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ನಿರ್ಮಾಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಒತ್ತು ನೀಡಿದರು. ವಾಹನ ಚಾಲಕರಿಗೆ ರಸ್ತೆಗಳನ್ನು ಸುರಕ್ಷಿತವಾಗಿಸಲು ರಸ್ತೆ ನಿರ್ಮಾಣದಲ್ಲಿ ತಮ್ಮ ಉತ್ತಮ ಕ್ರಮ ಕೈಗೊಳ್ಳಲು ಸರ್ಕಾರವು ಪ್ರತಿಭಾವಂತ ಎಂಜಿನಿಯರ್ಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಹಳಷ್ಟು ಎಕ್ಸ್ ಪ್ರೆಸ್ ವೇಗಳು ಮತ್ತು ರಸ್ತೆಗಳನ್ನು ನಿರ್ಮಿಸುತ್ತಿದ್ದು, ಇದು ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ರಸ್ತೆ ಸುರಕ್ಷತೆಗಾಗಿ ಸಚಿವಾಲಯವು ಖಾಸಗಿ ವಲಯದ ತಜ್ಞರನ್ನು ನೇಮಿಸುತ್ತಿದೆ. ಕಾನೂನು ಪಾಲನೆಯನ್ನು ನೋಡಿಕೊಳ್ಳುವ, ಟೋಲ್ಗಳನ್ನು ನಿರ್ವಹಿಸುವ ಮತ್ತು ರಸ್ತೆ ಗುಣಮಟ್ಟವನ್ನು ಗಮನಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಕ್ರಮ ವಹಿಸಲಾಗಿದೆ. ಈ ಯೋಜನೆಯನ್ನು ಮುಂದಿನ ಮೂರು ತಿಂಗಳಲ್ಲಿ ಅಂತಿಮಗೊಳಿಸಲಾಗುವುದು. ಮತ್ತು ಮೊದಲು ಪ್ರಮುಖ ಹೆದ್ದಾರಿಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ರಸ್ತೆ ಸುರಕ್ಷತೆಯನ್ನು ಸುಧಾರಿಸುವ ಅಗತ್ಯವನ್ನು ಮತ್ತು ಸಾರಿಗೆ ವಲಯದಲ್ಲಿ ಕೃತಕ ಬುದ್ಧಿಮತ್ತೆ(AI) ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಅಪಪಘಾತಗಳಲ್ಲಿ ಹೆಚ್ಚಿನ ಸಾವು ನೋವು ಸಂಭವಿಸುತ್ತವೆ. ಈ ಸಾವು ನೋವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು 18-36 ವಯಸ್ಸಿನವರು ಎಂದು ಅವರು ಹೈಲೈಟ್ ಮಾಡಿದ್ದಾರೆ.
ರಸ್ತೆ ಅಪಘಾತಗಳಿಂದಾಗುವ ಆರ್ಥಿಕ ನಷ್ಟವು ದೇಶದ ಒಟ್ಟು ಆಂತರಿಕ ಉತ್ಪನ್ನದ(ಜಿಡಿಪಿ) 3% ಎಂದು ಅಂದಾಜಿಸಲಾಗಿದೆ. ರಸ್ತೆ ಸುರಕ್ಷತೆಯನ್ನು ಸುಧಾರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಕ್ರಮಗಳು ನಡೆಯುತ್ತಿವೆ. ರಸ್ತೆ ಎಂಜಿನಿಯರಿಂಗ್ನಲ್ಲಿ ಸುಧಾರಣೆಯ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿರುವ ಭಾರತೀಯ ಸ್ಟಾರ್ಟಪ್ಗಳು ಮತ್ತು ಯುವ ಇಂಜಿನಿಯರ್ಗಳೊಂದಿಗೆ ಸಹಕರಿಸಲು ಸಲಹೆ ನೀಡಿದ್ದಾರೆ.
ಸುಧಾರಿತ ಎಂಜಿನಿಯರಿಂಗ್ ಪರಿಹಾರಗಳು, ಕಾನೂನು ಜಾರಿ ಮತ್ತು AI ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದೆ ರಸ್ತೆ ಸುರಕ್ಷತೆಯನ್ನು ಸಾಧಿಸಲಾಗುವುದಿಲ್ಲ. ತಂತ್ರಜ್ಞಾನವನ್ನು ಬಳಸಿಕೊಂಡು ಕಾನೂನು ಜಾರಿಯ ಹೊಸ ವಿಧಾನಗಳ ಬಗ್ಗೆಯೂ ಗಡ್ಕರಿ ತಿಳಿಸಿದ್ದು, AI ಮತ್ತು ಇತರ ನವೀನ ವಿಧಾನಗಳ ಮೂಲಕ ಸಂಚಾರ ಉಲ್ಲಂಘನೆಗಳನ್ನು ಗುರುತಿಸುವ ಪ್ರಯತ್ನಗಳನ್ನು ಅವರು ಉಲ್ಲೇಖಿಸಿದ್ದಾರೆ.
ಉಪಗ್ರಹ ಟೋಲ್ ವ್ಯವಸ್ಥೆಗಳನ್ನು ಅನ್ವೇಷಿಸುವುದು ಸೇರಿದಂತೆ ಟೋಲ್ ಸಂಗ್ರಹ ವಿಧಾನಗಳನ್ನು ನವೀಕರಿಸುವ ಯೋಜನೆಗಳನ್ನು ವಿವರಿಸಿ, ಇದು ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಟೋಲ್ ಸಂಗ್ರಹದಲ್ಲಿ ಪಾರದರ್ಶಕತೆ ತರುತ್ತದೆ ಎಂದು ಹೇಳಿದ್ದಾರೆ.