ನವದೆಹಲಿ: ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನೀತಿ ಆಯೋಗದ ವಿಶೇಷ ಆಹ್ವಾನಿತರಾಗಿ ನೇಮಕ ಮಾಡಲಾಗಿದೆ.
ಮೋದಿ 3.0 ಸರ್ಕಾರ ರಚನೆಯಾದ ಬೆನ್ನಲ್ಲೇ ನೀತಿ ಆಯೋಗ ಪುನರ್ ರಚನೆ ಮಾಡಲಾಗಿದೆ. ಆಯೋಗದ ವಿಶೇಷ ಆಹ್ವಾನಿತರಾಗಿ ಹೆಚ್.ಡಿ. ಕುಮಾರಸ್ವಾಮಿ, ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರನ್ನು ನೇಮಕ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೀತಿ ಆಯೋಗದ ಅಧ್ಯಕ್ಷರಾಗಿದ್ದು, ಸುಮನ್ ಬೇರಿ ಉಪಾಧ್ಯಕ್ಷರಾಗಿದ್ದಾರೆ. ವಿ.ಕೆ. ಸಾರಸ್ವತ್, ಸಚಿವರಾದ ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ಜಿತಿನ್ ಮಾಂಜಿ, ರಾಜನಾಥ್ ಸಿಂಗ್, ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್, ಚಿರಾಗ್ ಪಾಸ್ವಾನ್ ಸಮಿತಿಯ ಸದಸ್ಯರಾಗಿದ್ದಾರೆ.
ಕೇಂದ್ರ ಸರ್ಕಾರವು ಮಂಗಳವಾರ ನೀತಿ ಆಯೋಗದ ಸಂಯೋಜನೆಯನ್ನು ಮರುಸಂಘಟಿಸಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮಿತ್ರ ಪಕ್ಷಗಳ ಪ್ರತಿನಿಧಿಗಳನ್ನು ಸೇರ್ಪಡೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಯೋಗದ ಅಧ್ಯಕ್ಷರಾಗಿ ಉಳಿದಿದ್ದಾರೆ, ಉಪಾಧ್ಯಕ್ಷ ಮತ್ತು ಇತರ ಪೂರ್ಣಾವಧಿ ಸದಸ್ಯರ ಹುದ್ದೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೊಸ ಪದನಿಮಿತ್ತ ಸದಸ್ಯರಾಗಿದ್ದಾರೆ, ಕೇಂದ್ರ ಸಚಿವರಾದ ಜೆಪಿ ನಡ್ಡಾ, ಹೆಚ್.ಡಿ. ಕುಮಾರಸ್ವಾಮಿ, ಜಿತನ್ ರಾಮ್ ಮಾಂಝಿ, ರಾಜೀವ್ ರಂಜನ್ ಸಿಂಗ್, ರಾಮ್ ಮೋಹನ್ ನಾಯ್ಡು, ಜುಯಲ್ ಓರಮ್, ಚಿರಾಗ್ ಪಾಸ್ವಾನ್ ಮತ್ತು ಅನ್ನಪೂರ್ಣ ದೇವಿ ವಿಶೇಷ ಆಹ್ವಾನಿತರಾಗಿ ಸೇರ್ಪಡೆಗೊಂಡಿದ್ದಾರೆ.