ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನಿಂದ ಮತದಾನ ಸಾಗಿದೆ. ಮತದಾರರು ಉತ್ಸಾಹದಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ತಾನು ಮತದಾನ ಮಾಡಲ್ಲ ಎಂದು ನೇರವಾಗಿ ತಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ನಿಶಾ ಯೋಗೇಶ್ವರ್ ಮತದಾನ ಮಾಡಬೇಕಿತ್ತು. ಆದರೆ ಅವರು ಕಾರಣಾಂತರಗಳಿಂದ ತಾನು ವೋಟ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರಂಭದಿಂದಲೂ ತಂದೆ ಸಿಪಿಯೋಗೇಶ್ವರ್ ವಿರುದ್ಧ ಸಿಡಿದೆದ್ದಿರುವ ನಿಶಾ ಯೋಗೇಶ್ವರ್, ಇದೀಗ ಬಹಿರಂಗವಾಗಿ ತಾನು ಮತದಾನ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಿಶಾ ಯೋಗೇಶ್ವರ್, ಇಂದು ಉಪಚುನಾವಣೆ ನಡೆಯುತ್ತಿದೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ ನಾನು ಮತದಾನ ಮಡುತ್ತಿಲ್ಲ. ನನ್ನ ಮೂಲಭೂತ ಹಕ್ಕನ್ನೇ ಕಿತ್ತುಕೊಂಡಿದ್ದಾರೆ. ಹೀಗಿರುವಾಗ ನಾನು ಯಾವ ಹಕ್ಕಿಗಾಗಿ, ಯಾವ ಕಾರಣಕ್ಕಾಗಿ ಮತದಾನ ಮಾಡಲಿ? ಎಂದು ಪ್ರಶ್ನಿಸಿದ್ದಾರೆ.
ನನ್ನ ಇನ್ ಸ್ಟಾಗ್ರಾಂ, ಫೇಸ್ ಬುಕ್ ಎಲ್ಲವೂ ಹ್ಯಾಕ್ ಆಗಿದೆ. ಸೋಷಿಯಲ್ ಮೀಡಿಯಾ ಮಾತ್ರ ನನಗೆ ಇದ್ದಿದ್ದು, ನನ್ನ ವಿಚಾರಗಳನ್ನು ಜನರಿಗೆ ತಲುಪಿಸಲು ನನಗಿದ್ದ ಮಾರ್ಗ ಅದೊಂದೆಯಾಗಿತ್ತು. ಆದರೆ ಇಂದು ಅದು ಕೂಡ ಇಲ್ಲ. ನನ್ನ ಸಾಮಾಜಿಕ ಜಾಲತಾಣಗಳನ್ನು ಡಿಸ್ ಕನೆಕ್ಟ್ ಮಾಡಿಸಿದ್ದಾರೆ. ಯಾರೂ ನನ್ನ ಸಂಪರ್ಕ ಮಾಡಲು ಆಗುತ್ತಿಲ್ಲ. ಕೆಲವರು ನನಗೆ ಫೋನ್ ಮಾಡಿ ವೋಟ್ ಹಾಕಲು ಯಾವಾಗ ಬರುತ್ತೀರಾ ಎಂದು ಕೇಳುತ್ತಿದ್ದಾರೆ. ಆದರೆ ನಾನು ವೋಟ್ ಹಾಕಲ್ಲ. ನಾನು ಯಾವ ಹಕ್ಕಿಗಾಗಿ ವೋಟ್ ಹಾಕಲಿ? ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ನನಗೆ ಸಂವಿಧಾನದ ಮೇಲೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ. ಆದರೆ ಕೆಲವರ ಮೇಲೆ ನಂಬಿಕೆ ಇಲ್ಲ ಎಂದು ತಿಳಿಸಿದ್ದಾರೆ.