ಬೆಂಗಳೂರು: ಇತ್ತೀಚೆಗೆ ಬೆಂಗಳುರಿನ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ್ ಇಂಟರ್ ನ್ಯಾಷನಲ್ ಸ್ಪಾ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ ಬಗ್ಗೆ ಬಯಲಿಗೆಳೆದಿದ್ದರು. ಇದೀಗ ಸ್ಪಾ ಮಾಲೀಕನ ವಿರುದ್ಧ ಈ ಹಿಂದೆ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ನಿರ್ವಾಣ್ ಇಂಟರ್ ನ್ಯಾಷನಲ್ ಸ್ಪಾ ಮಾಲೀಕನ ವಿರುದ್ಧ ಎರಡು ತಿಂಗಳ ಹಿಂದಷ್ಟೇ ಮಹಿಳೆಯೊಬ್ಬರು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರಿಗೆ ಅದೊಂದು ಸ್ಪಾ ಸೆಂಟರ್ ರೀತಿ ಕಂಡು ಬಂದಿತ್ತು. ಆದರೆ ಅಲ್ಲಿ ವೇಶ್ಯಾವಾಟಿಕೆ ದಂಧೆ ಬಗ್ಗೆ ಸುಳಿವಿರಲಿಲ್ಲ.
ನಿರ್ವಾಣ್ ಇಂಟರ್ ನ್ಯಾಷನಲ್ ಸ್ಪಾನಲ್ಲಿ ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಮಹಿಳೆ ಎರಡು ತಿಂಗಳ ಹಿಂದೆ ಮಾಲೀಕ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈಗ ನಿರ್ವಾಣ್ ಸ್ಪಾದಲ್ಲಿ ವೇಶಾವ್ಯಾಟಿಕೆ ದಂಧೆ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ತನಿಖೆ ನಡೆಸುತಿದ್ದಂತೆ ಒನ್ನೊಂದೇ ಪ್ರಕರಣಗಳು ಬಯಲಾಗುತ್ತಿವೆ. ಸ್ಪಾ ಮಾಲೀಕನ ಮೇಲೆ ಅತ್ಯಾಚಾರ ಕೇಸ್ ದಾಖಲಿಸಿದ್ದ ಮಹಿಳೆ ಈ ಹಿಂದೆ ಮಧ್ಯಪ್ರದೇಶದಲ್ಲಿ ಹನಿಟ್ರ್ಯಾಪ್ ಕೇಸ್ ನ ಪ್ರಮುಖ ಆರೋಪಿ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ಹನಿಟ್ರ್ಯಾಪ್ ಕೇಸ್ ನಲ್ಲಿ ಮಧ್ಯಪ್ರದೇಶದಲ್ಲಿ ಬಂಧನಕ್ಕೀಡಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮಹಿಳೆ ಬೆಂಗಳೂರಿಗೆ ಶಿಫ್ಟ್ ಆಗಿದ್ದು, ಸ್ಪಾನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಸ್ಪಾನಲ್ಲಿ ಕಳ್ಳತನ ಆರೋಪದ ಮೇರೆಗೆ ಮಹಿಳೆಯನ್ನು ಬಂಧಿಸಲಾಗಿತ್ತು. ಬಿಡುಗಡೆ ಬಳಿಕ ಮಹಿಳೆ ವೈಟ್ ಫೀಲ್ಡ್ ಠಾಣೆಯಲ್ಲಿ ಮಾಲೀಕನ ಮೇಲೆ ಅತ್ಯಾಚಾರ, ಅಟ್ರಾಸಿಟಿ ಕೇಸ್ ದಾಖಲಿಸಿದ್ದಳು. ಸ್ಪಾ ಮಾಲೀಕನ ವಿರುದ್ಧ ದೂರು ಹಿನ್ನೆಲೆಯಲ್ಲಿ ವೈಟ್ ಫೀಲ್ಡ್ ಪೊಲೀಸರು ಸ್ಥಳ ಮಹಜರು ನಡೆಸಿದ್ದ ವೇಳೆ ಅಲ್ಲಿನ ಸಿಬ್ಬಂದಿ ಹೇಳಿಕೆ ಆಧರಿಸಿ ಅದೊಂದು ಸ್ಪಾ, ಯಾವುದೇ ದಂಧೆ ಬಗ್ಗೆ ಸುಳಿವಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಇದಾದ ಕೆಲ ದಿನಗಳಲ್ಲೇ ನಿರ್ವಾಣ್ ಇಂಟರ್ ನ್ಯಾಷನಲ್ ಸ್ಪಾನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಸ್ಪಾವನ್ನೇ ಮಾಂಸ ದಂಧೆಗೆ ಅಡ್ಡೆಯನ್ನಾಗಿ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದರು. ಹೊರಗಿನಿಂದ ಸ್ಪಾದಂತೆ ಬಿಂಬಿತವಾಗಿದ್ದ ಕಟ್ಟಡದ ಒಳಗೆ ವೇಶ್ಯಾವಾಟಿಕೆ ದಂದೆ ನಡೆಯುತ್ತಿದ್ದುದು ಬಯಲಾಗಿದೆ.