ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ಸದ್ಯ ಎಲ್ಲರ ಕಣ್ಣಿದೆ. ಅವರ ಬಜೆಟ್ ಆಶಾದಾಯಕವಾಗಿರಲಿದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಡೆದು ಬಂದ ದಾರಿ ಅನೇಕರಿಗೆ ಸ್ಪೂರ್ತಿಯಾಗಲಿದೆ.
ಯಶಸ್ಸು ಬರೀ ನಿಮ್ಮ ಜೀವನದ ಏಳ್ಗೆಯಲ್ಲ, ನೀವು ಇತರರಿಗೆ ಏನು ಮಾಡಲು ಬಯಸುತ್ತೀರಿ, ಇತರರ ಮೇಲೆ ಹೇಗೆ ಪ್ರಭಾವ ಬೀರುತ್ತೀರಿ ಎಂಬುದನ್ನೂ ಅವಲಂಭಿಸಿರುತ್ತದೆ. ದಿವಂಗತ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಒಂದೇ ಒಂದು ಭೇಟಿ, ನಿರ್ಮಲಾ ಸೀತಾರಾಮನ್ ಅವರ ಇಡೀ ಜೀವನವನ್ನು ಬದಲಾಯಿಸಿದೆ. ಅವರು ರಾಜಕೀಯದ ಒಂದೊಂದೆ ಮೆಟ್ಟಿಲೇರಲು ಇದು ಸಹಕಾರಿಯಾಗಿದೆ.
ಹೈದರಾಬಾದ್‌ನ ಶಾಲೆಯಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದ ನಂತರ ನಿರ್ಮಲಾ ಸೀತಾರಾಮನ್ ಯಶಸ್ವಿ ಪ್ರಯಾಣ ಶುರುವಾಯ್ತು. ಇಂದಿರಾ ಗಾಂಧಿಯವರ ನಂತರ ಭಾರತದ ರಕ್ಷಣಾ ಸಚಿವ ಸ್ಥಾನವನ್ನು ಅಲಂಕರಿಸಿದ ಏಕೈಕ ಮಹಿಳೆ ಇವರು. ಭಾರತದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಮಂತ್ರಿಯೂ ಹೌದು. ಚೆನ್ನೈನ ರಾಜಕೀಯೇತರ ಕುಟುಂಬಕ್ಕೆ ಸೇರಿರುವ ನಿರ್ಮಲಾ ಸೀತಾರಾಮನ್, ತಿರುಚಿರಾಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಪದವಿ ಪಡೆದರು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರ ತಂದೆ ನಾರಾಯಣನ್ ಸೀತಾರಾಮನ್ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಕೆ. ಸಾವಿತ್ರಿ ಗೃಹಿಣಿ.
ಜೆಎನ್‌ಯುನಲ್ಲಿ ಓದುತ್ತಿರುವಾಗ, ಅವರು ತಮ್ಮ ಜೀವನ ಸಂಗಾತಿ ಪರಕಾಲ ಪ್ರಭಾಕರ್ ಅವರನ್ನು ಭೇಟಿಯಾದರು. ಪ್ರಭಾಕರ್ ಭೇಟಿಯಾದ ನಂತರ ಅವರ ಪಯಣ ಅವರ ಜೀವನವನ್ನೇ ಬದಲಿಸಿತು. ಅವರ ಮದುವೆಯ ನಂತರ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರಭಾಕರ್ ಅವರ ಪಿಎಚ್‌ಡಿಗಾಗಿ ಇಬ್ಬರೂ ಲಂಡನ್‌ಗೆ ತೆರಳಿದರು. ಈ ವೇಳೆ ಸೀತಾರಾಮನ್, ಹ್ಯಾಬಿಟಾಟ್‌ನಲ್ಲಿ ಸೇಲ್ಸ್‌ಗರ್ಲ್ ಆಗಿ ಕೆಲಸ ಮಾಡಿದರು.
ಸೇಲ್ಸ್ ಗರ್ಲ್ ಆಗಿದ್ದ ಅವಧಿಯಲ್ಲಿ ಅವರು ಎಷ್ಟು ದಕ್ಷತೆಯನ್ನು ಸಾಬೀತುಪಡಿಸಿದರು ಎಂದರೆ ಕ್ರಿಸ್‌ಮಸ್ ಋತುವಿನಲ್ಲಿ ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಶಾಂಪೇನ್ ಬಾಟಲಿಯನ್ನು ಸಹ ನೀಡಲಾಯಿತು. ಈ ಮಧ್ಯೆ ಅವರು ಯುನೈಟೆಡ್ ಕಿಂಗ್‌ಡಮ್‌ನ ಕೃಷಿ ಎಂಜಿನಿಯರ್‌ಗಳ ಸಂಘದಲ್ಲಿ ಸಹಾಯಕ ಅರ್ಥಶಾಸ್ತ್ರಜ್ಞರಾಗಿಯೂ ಸೇವೆ ಸಲ್ಲಿಸಿದರು. ಹೆಚ್ಚುವರಿಯಾಗಿ ಅವರು ಬಿಬಿಸಿ ವರ್ಲ್ಡ್ ಸರ್ವಿಸ್‌ನಲ್ಲಿ ಕೆಲಸ ಮಾಡಿದರು. ಯುಕೆಯಲ್ಲಿನ ಪ್ರೈಸ್ ವಾಟರ್‌ಹೌಸ್‌ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಅನುಭವವನ್ನು ಹೊಂದಿದ್ದರು.
ಸೇಲ್ಸ್ ಗರ್ಲ್ ಆಗಿ ವೃತ್ತಿ ಜೀವನ ಆರಂಭಿಸಿದ ನಿರ್ಮಲಾ ಸೀತಾರಾಮನ್, ದೊಡ್ಡ ಗುರಿ ಇಟ್ಕೊಂಡು ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡಿದ್ರು. ಅದೇ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ.