ನವದೆಹಲಿ: 2024ರ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲಾಗುವುದು. ಬಜೆಟ್ ನಲ್ಲಿ ಯಾವುದೇ ಅತ್ಯಾಕರ್ಷಕ ಘೋಷಣೆಗಳು ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಿಐಐ ಜಾಗತಿಕ ಆರ್ಥಿಕ ನೀತಿ ಸಮಾವೇಶದಲ್ಲಿ ಮಾತನಾಡಿದ ಅವರು, ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುವುದು. ಮುಂದಿನ ವರ್ಷ ಮೇನಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಯಾವುದೇ ಹೊಸ ಘೋಷಣೆ ಮಾಡದೇ ಕೇವಲ ಲೇಖಾನುದಾನಕ್ಕೆ ಅನುಮೋದನೆ ಪಡೆಯಲಾಗುವುದು. ಇದು ಮಧ್ಯಂತರ ಬಜೆಟ್ ಆಗಿದ್ದು, ಜುಲೈನಲ್ಲಿ ವಾರ್ಷಿಕ ಆಯವ್ಯಯ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ ಇರುವುದರಿಂದ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಹಾಲಿ ಸರ್ಕಾರದ ವೆಚ್ಚಗಳಿಗೆ ಅನುಮೋದನೆ ಪಡೆಯಲು ಮಾತ್ರ ಬಜೆಟ್ ಸೀಮಿತವಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಬಜೆಟ್ ಮಂಡಿಸುವುದು ಲೇಖಾಅನುದಾನ ಪಡೆಯುವುದಕ್ಕೆ ಸೀಮಿತವಾಗಿದ್ದರೂ ಸರ್ಕಾರಗಳು ಜನಪ್ರಿಯ ಆಕರ್ಷಕ ಘೋಷಣೆ ಮಾಡುತ್ತವೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಲೇಖಾನುದಾನ ಪಡೆಯುವುದು ಬ್ರಿಟಿಷರು ಹಾಕಿಕೊಟ್ಟ ಸಂಪ್ರದಾಯವಾಗಿದ್ದು, ಚುನಾವಣೆ ವರ್ಷಗಳಲ್ಲಿ ಸರ್ಕಾರಗಳು ಕೂಡ ಇದನ್ನು ಪಾಲಿಸುತ್ತಿವೆ.