ನವದೆಹಲಿ: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾದ ಎರಡು ಅಸ್ವಾಭಾವಿಕ ಸಾವುಗಳು ನಿಫಾ ವೈರಸ್ ನಿಂದ ದ ಉಂಟಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ದೃಢಪಡಿಸಿದ್ದಾರೆ.
ಈ ಎರಡು ಸಾವುಗಳು ಕೋಝಿಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿವೆ. ಮೂವರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರಲ್ಲಿ ಒಬ್ಬರ 22 ವರ್ಷದ ಸಂಬಂಧಿ ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಅಲ್ಲದೆ, 4 ಮತ್ತು 9 ವರ್ಷದ ಇಬ್ಬರು ಮಕ್ಕಳು ಮತ್ತು 10 ತಿಂಗಳ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ನಿಫಾ ವೈರಸ್ ಸೋಂಕು ಮುಖ್ಯವಾಗಿ ಬಾವಲಿಗಳು, ಹಂದಿಗಳು, ನಾಯಿಗಳು ಮತ್ತು ಕುದುರೆಗಳಂತಹ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. ಝೂನೋಟಿಕ್ ಆಗಿರುವುದರಿಂದ, ಇದು ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬರುವ ಮಾನವರಿಗೆ ಕೂಡ ಹರಡಬಹುದು ಮತ್ತು ಗಂಭೀರ ಕಾಯಿಲೆಗೆ ಕಾರಣವಾಗಬಹುದು.ಜ್ವರ ಮತ್ತು ಮೆದುಳಿನ ಊತ ಇದರ ಲಕ್ಷಣವಾಗಿದ್ದು, ಇದನ್ನು ಎನ್ಸೆಫಾಲಿಟಿಸ್ ಎಂದು ಕರೆಯಲಾಗುತ್ತದೆ. ಈ ಹಿನ್ನೆಲೆ ಕೇರಳದಲ್ಲಿ ಕಟ್ಟೆಚ್ಚರ ನೀಡಲಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆಗಳು ಸೂಚನೆ ನೀಡಿದೆ.