ಮಂಗಳೂರು: ಡೆಂಗ್ಯೂ ಅಟ್ಟಹಾಸದ ನಡುವೆ ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಹೆಚ್ಚುತ್ತಿದ್ದು, ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ನರ್ಸ್ ಓರ್ವರು ಕೋಮಾಗೆ ಜಾರಿರುವ ಘಟನೆ ಬೆಳಕಿಗೆ ಬಂದಿದೆ.
ನಿಫಾ ವೈರಸ್ ರೋಗಿಯೊಬ್ಬರಿಗೆ ದಕ್ಷಿಣ ಕನ್ನಡ ಮೂಲದ ನರ್ಸ್ 24 ವರ್ಷದ ಟಿಟ್ಟೋ ಥೋಮಸ್ ಆರೈಕೆ ಮಾಡುತ್ತಿದ್ದರು. ಕಳೆದ 8 ದಿನಗಳಿಂದ ಸೋಂಕು ಟಿಟ್ಟೋ ಥೋಮಸ್ ಗೂ ತಗುಲಿದ್ದು, ಇದೀಗ ಯುವಕ ಕೋಮಾಗೆ ಜಾರಿದ್ದಾರೆ.
ಬಿ ಎಸ್ ಸಿ ನರ್ಸಿಂಗ್ ಪದವೀಧರ ಟಿಟ್ಟೋ ಥೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2023ರ ಸೆಪ್ಟೆಂಬರ್ ನಲ್ಲಿ ನಿಫಾ ಸೋಂಕಿತ ರೋಗಿಗೆ ಆರೈಕೆ ಮಾಡಿದ್ದರು. ಬಳಿಕ ಕ್ವಾರಂಟೈನ್ ನಲ್ಲಿದ್ದರು. ಎರಡು ತಿಂಗಳ ಬಳಿಕ ವಿಪರೀತ ತಲೆನೋವು ಆರಂಭವಾಗಿತ್ತು. ಸ್ಕ್ಯಾನಿಂಗ್ ಮಾಡಿಸಿದಾಗ ಮೆದುಳಿನ ಸ್ಟ್ರೋಕ್ ಎಂದು ತಿಳಿದುಬಂದಿದೆ. ಮಾರನೇ ದಿನವೇ ಕೋಮಾಗೆ ಜಾರಿದ್ದು, ಕಳೆದ ಎಂಟು ತಿಂಗಳಿಂದ ಆಸ್ಪತ್ರೆಯ ಆಡಳಿತ ಮಂಡಳಿ ವತಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. 40 ಲಕ್ಷಕ್ಕೂ ಅಧಿಕ ಖರ್ಚನ್ನು ಆಸ್ಪತ್ರೆಯೇ ಭರಿಸಿದೆ. ಆದರೂ ಟಿಟ್ಟೋ ಥೋಮಸ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ.
ಇದೀಗ ಕುಟುಂಬದವರು ಬೇರೆ ಆಸ್ಪತ್ರೆಗೆ ದಾಖಲಿಸಲು ಅವಕಾಶ ನೀಡುವಂತೆ ಕೋರಿ ಕೇರಳ ಸರ್ಕಾರದ ಮೊರೆ ಹೋಗಿದ್ದಾರೆ.