ರಾಮನಗರ: ನಾವು ಸೋತಿದ್ದೇವೆಯೇ ಹೊರತೂ ಸತ್ತಿಲ್ಲ. ಒಟ್ಟಾಗಿ ಹೋರಾಟ ಮಾಡೋಣ. ನಾನು ಕ್ಷೇತ್ರ ಬಿಟ್ಟು ಹೋಗುವುದಿಲ್ಲ, ನನ್ನ ಮೇಲೆ ಅನುಮಾನ ಬೇಡ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನ ಕೂಡ್ಲೂರಿನಲ್ಲಿ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶವನ್ನು ಯಾರೂ ನಿರೀಕ್ಷಿಸಿರಲಿಲ್ಲ. ನಾವು ಸೋಲು ಕಂಡಿದ್ದೇವೆ ಹೊರತೂ ಸತ್ತಿಲ್ಲ. ಒಟ್ಟಾಗಿ ಹೋರಾಟ ಮಾಡೋಣ. ಕ್ಷೇತ್ರದ 87 ಸಾವಿರಕ್ಕೂ ಹೆಚ್ಚು ಜನ ಮತ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಹೋರಾಟ ನಡೆಸೋಣ ಎಂದು ಹೇಳಿದ್ದಾರೆ.
ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಜಯಮುತ್ತು ರಾಜೀನಾಮೆ ಘೋಷಣೆ ಮಾಡಿದ್ದು, ಅವರಿಗೆ ತಮ್ಮ ರಾಜೀನಾಮೆ ವಾಪಸ್ ಪಡೆಯುವಂತೆ ನಿಖಿಲ್ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.