ಬಿಡದಿ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದು, ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ.
ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮತದಾರರ ತೀರ್ಪಿಗೆ ತಲೆ ಭಾಗುತ್ತೇನೆ. 87,000 ಮತಗಳನ್ನು ನೀಡಿದ ಚನ್ನಪಟ್ಟಣ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದರು.
ಈ ಸೋಲಿನ ಹೊಣೆ ನಾನೇ ಸ್ವೀಕರಿಸುತ್ತೇನೆ. ಸೋತಿದ್ದೇನೆ ಎಂದು ಸುಮ್ಮನೆ ಕೂರಲ್ಲ. ರಾಮನಗರ ಜಿಲ್ಲೆಯಲ್ಲಿ ಎಲ್ಲರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ ಎಂದರು.
ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಚರ್ಚಿಸುತ್ತೇವೆ. ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿಯನ್ನು ಬೆಳೆಸಿದ್ದು ರಾಮನಗರ ಜನ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನಾನು ಭರವಸೆ ಕೊಟ್ಟಿದ್ದೆ. ಆ ಭರವಸೆ ಕೇವಲ ಚುನಾವಣೆಗೆ ಮಾತ್ರ ಸೀಮಿತವಲ್ಲ. ನಾನು ಕೊಟ್ಟ ಭರವಸೆ ಈದೇರಿಸುತ್ತೇನೆ ಎಂದರು.