ಕೆಲವರಿಗೆ ರಾತ್ರಿ ಕೆಟ್ಟ ಸ್ವಪ್ನ ಬೀಳುತ್ತದೆ. ಬೀಳುವ ಒಂದು ಸ್ವಪ್ನ ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ. ಕೆಟ್ಟ ಸ್ವಪ್ನ ಯುವಜನತೆಗೆ ಮಾತ್ರ ಬೀಳುತ್ತೆ ಎಂಬ ಮಾತಿದೆ. ಆದ್ರೆ ಇದು ಸುಳ್ಳು. ಕೆಟ್ಟ ಸ್ವಪ್ನ ಹಿರಿಯರನ್ನೂ ಕಾಡುತ್ತದೆ. ದುಃಸ್ವಪ್ನಕ್ಕೂ ಆರೋಗ್ಯಕ್ಕೂ ಸಂಬಂಧವಿದೆ.
ಪ್ರತಿದಿನ ಒತ್ತಡ ಮತ್ತು ಅತೃಪ್ತಿ ಹೊಂದಿದ್ದರೆ, ನಿದ್ದೆ ಮಾಡುವಾಗ ದುಃಸ್ವಪ್ನ ಬೀಳುವ ಸಾಧ್ಯತೆಯಿದೆ. ಅಸಮತೋಲಿತ ಮಾನಸಿಕ ಆರೋಗ್ಯ ನಿದ್ರೆ ಮೇಲೆ ಪ್ರಭಾವ ಬೀರುತ್ತದೆ. ದಿನವಿಡೀ ಉದ್ವೇಗದಲ್ಲಿರುವ ವ್ಯಕ್ತಿ ರಾತ್ರಿ ನಿದ್ದೆ ಮಾಡುವಾಗಲೂ ಭಯಾನಕ ಕನಸುಗಳನ್ನು ಕಾಣುತ್ತಾನೆ.
ಔಷಧಿಗಳು ಮೆದುಳಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ರಕ್ತದೊತ್ತಡದ ಮಾತ್ರೆಗಳು, ಖಿನ್ನತೆ ಹೋಗಲಾಡಿಸುವ ಮಾತ್ರೆಗಳು ದುಃಸ್ವಪ್ನಕ್ಕೆ ಕಾರಣವಾಗುತ್ತವೆ.
ಗಂಭೀರ ಗಾಯ, ಲೈಂಗಿಕ ಮತ್ತು ದೈಹಿಕ ಕಿರುಕುಳ ಅಥವಾ ಜೀವನದಲ್ಲಿ ಯಾವುದೇ ರೀತಿಯ ಆಘಾತಕಾರಿ ಘಟನೆಗಳಿಗೆ ಒಳಗಾದಾಗ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದು ನಿದ್ರೆ ಮಾಡುವಾಗ ದುಃಸ್ವಪ್ನಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ದುಃಸ್ವಪ್ನಗಳನ್ನು ಆಘಾತಕಾರಿ ಒತ್ತಡದ ಕಾಯಿಲೆಯ ಲಕ್ಷಣವೆನ್ನಲಾಗುತ್ತದೆ.
ನಿದ್ರೆ ಮಾಡುವ ಮೊದಲು ಭಯಾನಕ ಚಿತ್ರಗಳನ್ನು ನೋಡುವುದು, ಓದುವುದರಿಂದಲೂ ಇಂಥ ಸ್ವಪ್ನ ಬೀಳಬಹುದು. ಅಲ್ಲಿನ ದೃಶ್ಯಗಳು ಸ್ವಪ್ನದಲ್ಲಿ ಕಾಡಬಹುದು.
ನಿದ್ರಾಹೀನತೆ ಕೂಡ ಇದಕ್ಕೆ ಕಾರಣವಾಗುತ್ತದೆ. ಸರಿಯಾಗಿ ನಿದ್ರೆ ಬರದೆ ಹೋದಲ್ಲಿ ಮೆದುಳು ನಾನಾ ವಿಷ್ಯಗಳನ್ನು ಆಲೋಚಿಸುತ್ತದೆ. ಈ ಅನಿದ್ರೆ, ಚಡಪಡಿಕೆ ಕೆಲವೊಮ್ಮೆ ದುಃಸ್ವಪ್ನಕ್ಕೆ ಕಾರಣವಾಗುತ್ತದೆ.