ಹಾವೇರಿ: ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಚೋಗಚಿಕೊಪ್ಪ ತಾಂಡಾದ ಸ್ಮಶಾನದಲ್ಲಿ ಮಧ್ಯರಾತ್ರಿ ಬೆತ್ತಲೆಯಾಗಿ ಮಹಿಳೆ ಸೇರಿದಂತೆ ನಾಲ್ವರು ಮಾಟ ಮಂತ್ರ ಮಾಡುತ್ತಿರುವುದು ಕಂಡು ಬಂದಿದೆ.
ಊರ ಹೊರಗಿನ ಸ್ಮಶಾನದಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೆತ್ತಲಾದ ಮಹಿಳೆ ಹಾಗೂ ಮೂವರು ಪುರುಷರು ಮೂವರು ಹುಡುಗಿಯರ ಫೋಟೋ ಇಟ್ಟು ಅದರ ಸುತ್ತಲೂ ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ಮಾಡುತ್ತಿದ್ದರು. ಮನುಷ್ಯನ ತಲೆ ಬುರುಡೆಯ ಮೇಲೆ ವ್ಯಕ್ತಿ ಒಬ್ಬರ ಹೆಸರು ಬರೆದು ಕೋಳಿ ರಕ್ತದಲ್ಲಿ ಪೂಜೆ ಮಾಡಿದ್ದಾರೆ. ನಿಂಬೆ ಹಣ್ಣುಗಳಿಗೆ ಲವಂಗ ಚುಚ್ಚಿ ಸ್ಮಶಾನದ ಸುತ್ತಲೂ ಇಟ್ಟಿದ್ದಾರೆ.
ಇವರು ಅಮಾವಾಸ್ಯೆಯಿಂದಲೇ ಪೂಜೆ ನಡೆಸುತ್ತಿದ್ದರು. ಈ ಬಗ್ಗೆ ಮೊದಲ ದಿನ ಪ್ರಶ್ನಿಸಿದಾಗ ಮೀನು ಹಿಡಿಯಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಸೋಮವಾರ ರಾತ್ರಿ ಸ್ಮಶಾನದಲ್ಲಿ ಪೂಜೆ ನಡೆಯುತ್ತಿರುವ ವೇಳೆ ಸ್ಥಳೀಯರು ತೆರಳಿದಾಗ ವಿಚಿತ್ರ ವಸ್ತುಗಳನ್ನು ಇಟ್ಟು ಪೂಜಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಮೂವರು ಪರಾರಿಯಾಗಿದ್ದು, ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ವಾಮಾಚಾರ ಮಾಡುತ್ತಿದ್ದ ಶಂಕೆ ಇದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.