ಟೈಪೋ ಎರರ್ನಿಂದಾಗಿ ನೈಜೀರಿಯನ್ ಪ್ರಜೆಗೆ ಕೋರ್ಟ್ ಜೈಲು ಶಿಕ್ಷೆ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಜೈಲುವಾಸಿಯಾದ ವ್ಯಕ್ತಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಸರ್ಕಾರಕ್ಕೆ ಆದೇಶ ಮಾಡಿದೆ.
ಕೆಮಿಕಲ್ ಅನಲೈಸರ್ ನೀಡಿದ ವರದಿಯಲ್ಲಿ ಟೈಪೋ ಎರರ್ನಿಂದಾಗಿ ನೈಜೀರಿಯನ್ ಪ್ರಜೆ 1.5 ವರ್ಷಗಳಿಗೂ ಹೆಚ್ಚು ಕಾಲ ತಪ್ಪಾಗಿ ಜೈಲಿನಲ್ಲಿರಬೇಕಾಗಿ ಬಂದಿತ್ತು. ಇದೀಗ ಮಹಾರಾಷ್ಟ್ರ ಸರ್ಕಾರ ಅವರಿಗೆ ಎರಡು ಲಕ್ಷ ರೂ. ಪರಿಹಾರ ನೀಡಬೇಕಿದೆ.
ತಕ್ಷಣವೇ ಸೂಚನೆ ಪಾಲಿಸುವಂತೆ ಸರ್ಕಾರಿ ವಕೀಲರಿಗೆ ಕೋರ್ಟ್ ಸೂಚನೆ ನೀಡಿತ್ತು. ಆದರೆ ಅವರು ಸಮಯ ಕೇಳಿದ್ದರು. ನ್ಯಾಯಮೂರ್ತಿ ಭಾರತಿ ಡಾಂಗ್ರೆ, ತಕ್ಷಣವೇ ಸರ್ಕಾರಕ್ಕೆ ಕರೆ ಮಾಡಿ ತಮ್ಮ ಆದೇಶ ತಿಳಿಸಿ ಎಂದು ತಾಕೀತು ಮಾಡಿದ್ದಾರೆ.
ಸ್ವಲ್ಪ ಸಮಯದ ನಂತರ, ನಾನು ಮುಖ್ಯ ಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿಗೆ ನ್ಯಾಯಾಲಯದ ಸೂಚನೆ ಕುರಿತು ಮಾಹಿತಿ ನೀಡಿದ್ದೇನೆ. ಸರ್ಕಾರವು ಅಧಿಕಾರಿಯ ವಿರುದ್ಧ ತನಿಖೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ, ಪರಿಹಾರಕ್ಕಾಗಿ ಪ್ರಸ್ತುತ ಯಾವುದೇ ನೀತಿ ಇಲ್ಲ ಎಂದು ಉತ್ತರ ಬಂದಿದೆ ಎಂದು ಕೋರ್ಟ್ಗೆ ಸರ್ಕಾರಿ ವಕೀಲರು ವಿವರಿಸಿದರು.
ಈ ವೇಳೆ ನ್ಯಾಯಮೂರ್ತಿ ಡಾಂಗ್ರೆ, ಹಾಗಾದರೆ ನೀವು ಜನರನ್ನು ಜೈಲಿನಲ್ಲಿ ಇಡಬಹುದೇ ಮತ್ತು ಯಾವುದೇ ಪರಿಹಾರ ನೀತಿಯಿಲ್ಲದ ಕಾರಣ ಪರಿಹಾರವನ್ನು ನೀಡುವುದಿಲ್ಲವೇ? ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ವಿಷಯ ಬಂದಾಗ ನಿಮಗೆ ನೀತಿ ಬೇಕೇ? ಎಂದು ತರಾಟೆಗೆ ತೆಗೆದುಕೊಂಡರು.
ಬಳಿಕ, ನ್ಯಾಯಮೂರ್ತಿ ಡಾಂಗ್ರೆ ಅವರು ನಾನು ಪರಿಹಾರವನ್ನು ನೀಡಲು ಆದೇಶಿಸುತ್ತೇನೆ. ಅದನ್ನು ಅಧಿಕಾರಿಯಿಂದ ವಸೂಲಿ ಮಾಡಲು ಸೂಚಿಸುತ್ತೇನೆ ಎಂದು ಬಿಸಿ ಮುಟ್ಟಿಸಿದರು.
ಘೋಡ್ಬಂದರ್ ರಸ್ತೆಯಲ್ಲಿ ಯುವಕರಿಗೆ ಕೊಕೇನ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಆತನನ್ನು ಹಿಡಿಯಲು ಬಲೆ ಬೀಸಲಾಗಿತ್ತು. ವೈಯಕ್ತಿಕ ಹುಡುಕಾಟ ನಡೆಸಿದಾಗ ಸುಮಾರು 116.19 ಗ್ರಾಂ ತೂಕದ ಕೊಕೇನ್ ಎಂದು ಹೇಳಲಾದ ನಿಷಿದ್ಧ ವಸ್ತು, ಸುಮಾರು 40.73 ಗ್ರಾಂ ತೂಕದ ಕೇಸರಿ ಬಣ್ಣದ ಹಾರ್ಟ್ ಶೇಪ್ ಮಾತ್ರೆಗಳನ್ನು ಹೊಂದಿರುವ ಪೌಚ್ ಮತ್ತು ಸುಮಾರು 4.41 ಗ್ರಾಂ ತೂಕದ ಅಮಲು ಬರುವ ಗುಲಾಬಿ ಬಣ್ಣದ ಮಾತ್ರೆಗಳು ಪತ್ತೆಯಾಗಿವೆ. ಇದೆಲ್ಲವೂ ವಶಪಡಿಸಿಕೊಂಡ ಔಷಧಿಗಳನ್ನು ರಾಸಾಯನಿಕ ವಿಶ್ಲೇಷಣೆ (ಸಿಎ) ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ವರದಿ ಬಂದಾಗ, ನೈಜೀರಿಯನ್ ಪ್ರಜೆಯಲ್ಲಿ ಸಿಕ್ಕಿದ ಡ್ರಗ್ಸ್ ಕೊಕೇನ್ ಅಥವಾ ಎಕ್ಸ್ಟಿಸಿ ಅಲ್ಲ ಲಿಡೋಕೇನ್, ಟ್ಯಾಪೆಂಟಡಾಲ್ ಮತ್ತು ಕೆಫೀನ್ ಎಂದು ಹೇಳಲಾಗಿದೆ. ಆದರೂ ಫೋರೆನ್ಸಿಕ್ ಲ್ಯಾಬ್ನ ಸಹಾಯಕ ನಿರ್ದೇಶಕರ ವರದಿಯು ಲಿಡೋಕೇನ್ ಮತ್ತು ಟ್ಯಾಪೆಂಟಾಲ್ ಡ್ರಗ್ಸ್ ಎನ್ಡಿಪಿಎಸ್ ಕಾಯಿದೆಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿತ್ತು.
ಔರಂಗಾಬಾದ್ನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕರು ಒಂದು ವರ್ಷದ ನಂತರ ವಿಷಾದ ವ್ಯಕ್ತಪಡಿಸಿ, ವಿಶ್ಲೇಷಣೆಯನ್ನು ಸರಿಪಡಿಸಿ ಎನ್ಡಿಪಿಎಸ್ ಕಾಯಿದೆ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ನಡೆದ ವಿಚಾರಣೆಯ ವೇಳೆ, ನೈಜೀರಿಯನ್ನಿಂದ ವಶಪಡಿಸಿಕೊಂಡಿರುವ ವಸ್ತುವು ಮಾದಕವಸ್ತು ಅಲ್ಲ, ಆದ್ದರಿಂದ ಅವರು ಜಾಮೀನಿನ ಮೇಲೆ ಬಿಡುಗಡೆಗೆ ಅರ್ಹರು ಎಂದು ಪೀಠ ಹೇಳಿದೆ.
ಎಲ್ಲಾ ನಾಗರಿಕರಿಗೆ ಮಾತ್ರವಲ್ಲದೆ ವಿದೇಶಿ ಪ್ರಜೆಗೂ ಸಹ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ನ್ಯಾಯಮೂರ್ತಿ ಡಾಂಗ್ರೆ ಹೇಳಿದರು.
25,000 ರೂಪಾಯಿ ಸ್ಥಳೀಯ ಶ್ಯೂರಿಟಿಯ ಮೇಲೆ ನ್ಯಾಯಾಲಯ ನೈಜೀರಿಯನ್ ಪ್ರಜೆಗೆ ಜಾಮೀನು ನೀಡಿದೆ. ನೈಜೀರಿಯನ್ನರ ಪರ ವಕೀಲ ಅಶ್ವಿನಿ ಆಚಾರಿ ಅವರು, ಆರೋಪಿಗಳಿಗೆ ತಾತ್ಕಾಲಿಕ ನಗದು ಜಾಮೀನಿನ ಮೇಲೆ ಹೊರಬರಲು ನ್ಯಾಯಾಲಯವನ್ನು ಕೋರಿದರು.
ಏಕೆಂದರೆ ವಿದೇಶಿ ಪ್ರಜೆಗೆ ಸ್ಥಳೀಯ ವ್ಯಕ್ತಿಗಳು ಶ್ಯೂರಿಟಿಯಾಗಿ ನಿಲ್ಲಲು ಕಷ್ಟವಾಗುತ್ತದೆ. ಆದರೆ, ಪೀಠವು ಅದನ್ನು ಮಾಡಲು ನಿರಾಕರಿಸಿದೆ ಮತ್ತು ನೈಜೀರಿಯಾ ಪ್ರಜೆಯು ದೇಶದಿಂದ ಹೊರಗೆ ಪ್ರಯಾಣಿಸಬಾರದು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ.