
ಅಬುಜಾ: ಮಧ್ಯ ನೈಜೀರಿಯಾದ ನೈಜರ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 27 ಜನ ಸಾವನ್ನಪ್ಪಿದ್ದಾರೆ. ಮತ್ತು ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ತುರ್ತು ನಿರ್ವಹಣಾ ಸಂಸ್ಥೆ ಶುಕ್ರವಾರ ತಿಳಿಸಿದೆ.
ಮಧ್ಯ ಕೋಗಿ ರಾಜ್ಯದ ಮಿಸ್ಸಾ ಸಮುದಾಯದ ಬಹುತೇಕ ವ್ಯಾಪಾರಿಗಳನ್ನು ಹೊತ್ತ ದೋಣಿ ನೆರೆಯ ನೈಜರ್ ರಾಜ್ಯದ ವಾರದ ಮಾರುಕಟ್ಟೆಗೆ ತೆರಳುತ್ತಿದ್ದಾಗ ಗುರುವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಒಳನಾಡು ಜಲಮಾರ್ಗ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಅಪಘಾತದ ಅಂತಿಮ ಸಾವಿನ ಸಂಖ್ಯೆ ತಿಳಿಯುತ್ತದೆ ಎಂದು ಕೋಗಿ ರಾಜ್ಯ ತುರ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಸಾಂಡ್ರಾ ಮೂಸಾ ಹೇಳಿದ್ದಾರೆ. ಇಲ್ಲಿಯವರೆಗೆ 27 ಶವಗಳನ್ನು ಹೊರತೆಗೆಯಲಾಗಿದೆ, ಆದರೆ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಯಾವುದೇ ಪ್ರಯಾಣಿಕರು ಲೈಫ್ ಜಾಕೆಟ್ಗಳನ್ನು ಧರಿಸಿರಲಿಲ್ಲ, ಇದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ದೋಣಿಯಲ್ಲಿ ಸುಮಾರು 200 ಪ್ರಯಾಣಿಕರು ಇದ್ದರು. ಶುಕ್ರವಾರದ ವೇಳೆಗೆ ರಕ್ಷಕರು ನದಿಯಿಂದ 27 ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ, ಘಟನೆ ಸಂಭವಿಸಿದ ಸುಮಾರು 12 ಗಂಟೆಗಳ ನಂತರ ಯಾವುದೇ ಬದುಕುಳಿದವರು ಕಂಡುಬಂದಿಲ್ಲ. ದೋಣಿ ಮುಳುಗಲು ಓವರ್ಲೋಡ್ ಕಾರಣ ಎಂದು ಹೇಳಲಾಗಿದೆ.
ನೈಜೀರಿಯಾದಲ್ಲಿ ಉತ್ತಮ ರಸ್ತೆಗಳ ಕೊರತೆ ಇದೆ. ಅನೇಕರಿಗೆ ಪರ್ಯಾಯ ಮಾರ್ಗಗಳಿಲ್ಲ. ಜಲಸಾರಿಗೆ ದೋಣಿಗಳಲ್ಲಿ ಓವರ್ಲೋಡ್ ಮಾಡುವುದು ಸಾಮಾನ್ಯವಾಗಿದೆ.