ನಿಯಾಮಿ: ನೈಜರ್ ಆಗ್ನೇಯ ಭಾಗದ ಹಳ್ಳಿಯೊಂದರಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆ ಬೋಕೋ ಹರಾಮ್ ಉಗ್ರರು ನಡೆಸಿದ ದಾಳಿಯಲ್ಲಿ 28 ಮಂದಿ ನಾಗರಿಕರು ಬಲಿಯಾಗಿದ್ದಾರೆ.
ನೈಜರ್ ದೇಶದ ಆಗ್ನೇಯ ಭಾಗದ ನಗರ ಡಿಫಾದಿಂದ 75 ಕಿಲೋ ಮೀಟರ್ ದೂರದ ಕೊಮೊಡೌಗೌ ನದಿಯ ಅಂಚಿನಲ್ಲಿರುವ ಟೌಮೋರ್ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಹಳ್ಳಿಗೆ ನುಗ್ಗಿದ ಭಯೋತ್ಪಾದಕರು ಮಾರುಕಟ್ಟೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಓಡಿ ಹೋಗಲು ಯತ್ನಿಸಿದವರ ಮೇಲೆ ಗುಂಡು ಹಾರಿಸಿದ್ದಾರೆ. ಕೆಲವರು ಪಾರಾಗುವ ಪ್ರಯತ್ನದಲ್ಲಿ ನದಿಗೆ ಹಾರಿ ಸಾವನ್ನಪ್ಪಿದ್ದಾರೆ. ಅಲ್ಲದೇ ತಮ್ಮ ಅಟ್ಟಹಾಸದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದಾರೆ.
ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆ ವರೆಗೆ ಉಗ್ರರು ಅಟ್ಟಹಾಸ ಮೆರೆದು ನಾಗರೀಕರನ್ನು ಕೊಂದಿದ್ದಾರೆ ಎಂದು ನೈಜರ್ ಸರ್ಕಾರ ಸೋಮವಾರ ಮಾಹಿತಿ ನೀಡಿದೆ. ಘಟನಾ ಸ್ಥಳಕ್ಕೆ ಡಿಫಾದ ರಾಜ್ಯಪಾಲ ಇಸ್ಸಾ ಲೆಮೈನ್ ಭೇಟಿ ನೀಡಿದ್ದು ಇದೊಂದು ವಿವರಿಸಲಾಗದ ದುರಂತವಾಗಿದೆ. ನೂರಾರು ಮನೆಗಳು ನಾಶವಾಗಿದ್ದು, ಜನ ದಿಕ್ಕಾಪಾಲಾಗಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ನೈಜರ್ ಸರ್ಕಾರ 72 ಗಂಟೆಗಳ ಶೋಕಾಚರಣೆ ಘೋಷಿಸಿದೆ.