ಬಳ್ಳಾರಿ : ನಿಫಾ ವೈರಸ್ ಸಂಬಂಧಿಸಿದಂತೆ, ಜನರು ಆತಂಕ ಪಡಬಾರದು. ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನಿಫಾ ವೈರಸ್ವು ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಕೇರಳಕ್ಕೆ ನಾಗರೀಕರು ಪ್ರಯಾಣ ಬೆಳೆಸುವ ಸಾಧ್ಯತೆ ಹಿನ್ನೆಲೆ ಹಾಗೂ ಜಿಲ್ಲೆಯ ಕೆಲವು ಭಾಗದಲ್ಲಿ ಬಾವಲಿಗಳು ಕಂಡುಬರುವ ಪ್ರದೇಶಗಳು ಇರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜಾಗೃತಿಯನ್ನು ಮೂಡಿಸಲು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ಜಿಲ್ಲೆಯಾದ್ಯಾಂತ ಸರ್ವೇಕ್ಷಣಾ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಎಲ್ಲಾ ಹಂತಗಳಲ್ಲಿ ನಿಫಾ ವೈರಸ್ ರೋಗ ಹರಡುವಿಕೆಯನ್ನು ತಡೆಗಟ್ಟಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿಫಾ ವೈರಸ್ ಎಂದರೇನು?
ನಿಫಾ ವೈರಸ್ ಎಂಬುದು ಝೂನೋಟಿಕ್ (ಪ್ರಾಣಿಜನ್ಯ) ಖಾಯಿಲೆಯಾಗಿದ್ದು, ಇದು ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ವೈರಲ್ ಸೋಂಕು ಬಾವಲಿ, ಹಂದಿ, ನಾಯಿ, ಕುದುರೆ ಸೇರಿದಂತೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮಲೇಶಿಯಾದ ನಿಫಾ ಎಂಬಲ್ಲಿ 1999ರಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿದ್ದರಿಂದ ಅದಕ್ಕೆ ನಿಫಾ ಎಂದು ಹೆಸರು ಬಂದಿದೆ. ಈ ವೈರಸ್ ಸೋಂಕು ಮಲೇಷಿಯಾ, ಸಿಂಗಪೂರ್, ಭಾರತ ಮತ್ತು ಬಾಂಗ್ಲಾದೇಶದಲ್ಲೂ ಈ ಹಿಂದೆ ಹರಡಿತ್ತು. ಪ್ರಸ್ತುತ ನೆರೆಯ ರಾಜ್ಯ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ 05 ನಿಫಾ ಪ್ರಕರಣಗಳು ಕಂಡುಬಂದಿದ್ದು, 02 ಸಾವು ಸಂಭವಿಸಿದೆ. ರಾಜ್ಯದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ನಿಫಾ ಜ್ವರವು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುವ ಅಪಾಯಕಾರಿ ವೈರಸ್ ಸೋಂಕು ಆಗಿದೆ ಎಂದು ತಿಳಿಸಿದ್ದಾರೆ.
ರೋಗದ ಲಕ್ಷಣಗಳು:
ಮನುಷ್ಯರಲ್ಲಿ ಜ್ವರ, ತಲೆನೋವು, ತಲೆಸುತ್ತುವಿಕೆ, ಮೈ ಕೈ ನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಾಜ್ಞಾಹೀನತೆ, ದಿಗ್ಬ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ನಂತರ ಸಾವು ಸಂಭವಿಸಬಹುದಾಗಿದೆ.
ಪ್ರಾಣಿಗಳಲ್ಲಿ: ಹಂದಿಗಳಲ್ಲಿ ಉಸಿರಾಟದ ತೊಂದರೆ, ನರದೌರ್ಬಲ್ಯ (ನರಮಂಡಲದ ಸಿಂಡ್ರೋಮ್) ಕಂಡುಬರುತ್ತದೆ.
ಏನು ಮಾಡಬೇಕು..?
ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂಥಹ ಸೋಂಕಿತ ಜಾನುವಾರುಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿರಸಬೇಕು. ಶಂಕಿತ ಮಾನವ ಪ್ರಕರಣಗಳನ್ನು ಪ್ರತ್ಯೇಕವಾಗಿಡಬೇಕು. ಶಂಕಿತ ಪ್ರಕರಣಗಳು ಬಳಸುವ ಬಟ್ಟೆ, ಪಾತ್ರಗಳು ಹಾಗೂ ಮುಖ್ಯವಾಗಿ ಸ್ನಾನ ಮತ್ತು ಶೌಚಾಲಯದಲ್ಲಿ ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನಿನಿಂದ ಶುಚಿಗೊಳಿಸಬೇಕು ಹಾಗೂ ಅವುಗಳ ನೈರ್ಮಲ್ಯವನ್ನು ನಿರ್ವಹಿಸಬೇಕು. ಹಸ್ತ ಲಾಘವ ಕೊಡುವುದನ್ನು ತಪ್ಪಿಸಿ ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು (ಗ್ಲೌಸ್) ಕೈಗವಸುಗಳನ್ನು ಧರಿಸುವುದು ಅಗತ್ಯವಾಗಿದೆ. ಫ್ಲೂ-ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ತಿಳಿಸಿದ್ದಾರೆ.
ಏನು ಮಾಡಬಾರದು..?
ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ಹಾಗೂ ರಸ್ತೆಯ ಬದಿಗಳಲ್ಲಿ ಕತ್ತರಿಸಿ ಇಟ್ಟ ಹಣ್ಣುಗಳನ್ನು ತಿನ್ನಬಾರದು. ಬಾವುಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರು ಕುಡಿಯಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳಬೇಕು. ರೋಗಿಯ ಶರೀರಸ್ರಾವದೊಂದಿಗೆ (ಜೊಲ್ಲು, ಬೆವರು, ಮೂತ್ರ ಇತ್ಯಾದಿ) ಸಂಪರ್ಕ ತಪ್ಪಿಸಿಬೇಕು ಎಂದು ತಿಳಿಸಿದ್ದಾರೆ.
ಸೋಂಕಿಗೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ಶೀಘ್ರ ಪತ್ತೆಹಚ್ಚುವಿಕೆ ಹಾಗೂ ತ್ವರಿತ ಚಿಕಿತ್ಸೆ ನೀಡುವುದು ಅವಶ್ಯಕವಾಗಿರುತ್ತದೆ. ರೋಗಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸಬಹುದಾಗಿದೆ. ರೋಗ ಹರಡುವ ರೀತಿ ಮತ್ತು ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು ಆಸ್ಪತ್ರೆಗಳಲ್ಲಿ ಜನರ ಮಧ್ಯೆ ಸೋಂಕು ಹರಡುವುದನ್ನು ನಿಯಂತ್ರಿಸುವುದು ಉತ್ತಮ ಪದ್ಧತಿಯಾಗಿದೆ ಎಂದು ಡಿಹೆಚ್ಒ ಡಾ.ವೈ ರಮೇಶ ಬಾಬು ಅವರು ತಿಳಿಸಿದ್ದಾರೆ.