ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಎನ್‌ಐಎ ಕುಣಿಕೆ ಬಿಗಿಗೊಳಿಸಿದ್ದು, ದಾವೂದ್ ಸಹರ ಛೋಟಾ ಶಕೀಲ್‌ನ ಸಂಬಂಧಿ, ಹಾಜಿ ಅಲಿ ದರ್ಗಾ ಟ್ರಸ್ಟಿಯನ್ನು ಬಂಧಿಸಿದೆ.
ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಸೋಮವಾರ ಮುಂಬೈ ಮತ್ತು ಥಾಣೆ ಜಿಲ್ಲೆಯ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ನಾಗ್ಪಾಡಾ, ಭೆಂಡಿ ಬಜಾರ್, ಮಜಗಾಂವ್, ಪರೇಲ್, ಮಾಹಿಮ್, ಸಾಂತಾಕ್ರೂಜ್, ಕುರ್ಲಾ, ಗೋರೆಗಾಂವ್, ಬೊರಿವಲಿ, ಮುಂಬ್ರಾ(ಥಾಣೆ) ಮತ್ತು ಇತರ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಈ ದಾಳಿಗಳು ಮುಖ್ಯವಾಗಿ 1993 ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಸಹಚರರ ಮೇಲೆ ಕೇಂದ್ರೀಕೃತವಾಗಿವೆ. ಛೋಟಾ ಶಕೀಲ್ ನ ಸಹಾಯಕ ಸಲೀಂ ಖುರೇಷಿ ಅಕಾ ಸಲೀಂ ಫ್ರೂಟ್ ಮತ್ತು ಹಾಜಿ ಅಲಿ ದರ್ಗಾದ ಟ್ರಸ್ಟಿಯನ್ನು ಎನ್‌ಐಎ ಬಂಧಿಸಿದೆ.
ಛೋಟಾ ಶಕೀಲ್ ನ ಸೋದರ ಸೊಸೆಯ ಪತಿಯನ್ನೂ ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ. ಸಲೀಂ ಖುರೇಷಿಯನ್ನು ದಕ್ಷಿಣ ಮುಂಬೈನ ಭೆಂಡಿ ಬಜಾರ್ ಪ್ರದೇಶದಲ್ಲಿನ ಅವರ ನಿವಾಸದಿಂದ ಅಧಿಕಾರಿಗಳು ಬಂಧಿಸಿದ್ದಾರೆ. ಹಾಜಿ ಅಲಿ ದರ್ಗಾ ಮತ್ತು ಮಾಹಿಮ್ ದರ್ಗಾದ ಟ್ರಸ್ಟಿ ಸೊಹೈಲ್ ಖಾಂಡ್ವಾನಿ ಅವರನ್ನೂ ಮಾಹಿಮ್ ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ.