ಚೆನ್ನೈ: ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬುಧವಾರ ಮೂವರನ್ನು ಬಂಧಿಸಿದೆ.
ಬಂಧಿತ ಮೂವರನ್ನು ಪೋದನೂರಿನ ಮೊಹಮ್ಮದ್ ಶೇಖ್ ಫರೀಕ್ ಅವರ ಮಗ ಮೊಹಮ್ಮದ್ ತೌಫೀಕ್(25), ಕಾಸಿಯ ಮಗ ಕೊಣ್ಣೂರಿನ ಉಮರ್ ಫಾರೂಕ್ ಅಲಿಯಾಸ್ ಶ್ರೀನಿವಾಸನ್(39) ಮತ್ತು ಬರಾಕತ್ ಅವರ ಮಗ ದಕ್ಷಿಣ ಉಕ್ಕಡಂನ ಫಿರೋಸ್ ಖಾನ್(28) ಎಂದು ಗುರುತಿಸಲಾಗಿದೆ.
ಸ್ಫೋಟದ ನಂತರ, ಪೊಲೀಸರು ಉಕ್ಕಡಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಪ್ರಕರಣವನ್ನು ಅಕ್ಟೋಬರ್ 27 ರಂದು ಎನ್ಐಎ ಮರು ದಾಖಲಿಸಿದೆ.
ಅಕ್ಟೋಬರ್ 23 ರಂದು ಕೊಯಮತ್ತೂರು ಜಿಲ್ಲೆಯ ಕೊಟ್ಟೈ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಸ್ಫೋಟಕ ತುಂಬಿದ್ದ ಕಾರು ಸ್ಫೋಟಗೊಂಡಿತ್ತು. ಮೃತ ಆರೋಪಿ ಜಮೇಶಾ ಮುಬೀನ್ ಐಸಿಸ್ಗೆ ಮಾರುಹೋಗಿ ಆತ್ಮಹತ್ಯಾ ದಾಳಿ ನಡೆಸಲು ಯೋಜಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರು ನಿರ್ದಿಷ್ಟ ಧಾರ್ಮಿಕ ಸ್ಮಾರಕಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಲು ಜನರಲ್ಲಿ ಭಯಭೀತಿ ಮೂಡಿಸಲು ಬಯಸಿದ್ದರು ಎಂದು ಹೇಳಲಾಗಿದೆ.
ಭಯೋತ್ಪಾದಕ ಕೃತ್ಯವೆಸಗಿದ ಜಮೇಶಾ ಮುಬೀನ್ ಗೆ ಇವರು ಬೆಂಬಲ ನೀಡಿದ್ದರು. ಮೊಹಮ್ಮದ್ ತೌಫೀಕ್ ದೋಷಾರೋಪಣೆಯ ಸಾಹಿತ್ಯ/ಪುಸ್ತಕಗಳನ್ನು ಹೊಂದಿದ್ದ ಮತ್ತು ಸ್ಫೋಟಕಗಳನ್ನು ತಯಾರಿಸುವ ಬಗ್ಗೆ ಕೈಬರಹದ ಟಿಪ್ಪಣಿಗಳನ್ನು ಕೂಡ ಹೊಂದಿದ್ದಾನೆ ಎಂದು ಹೇಳಲಾಗಿದೆ.
ಕೊಯಮತ್ತೂರು ಸ್ಫೋಟದ ನಂತರ, ನವೆಂಬರ್ನಲ್ಲಿ ಮಂಗಳೂರಿನ ಹೊರವಲಯದಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಕೊಯಮತ್ತೂರು ದೇವಸ್ಥಾನದಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಮಂಗಳೂರು ಸ್ಫೋಟ ಪ್ರಕರಣಕ್ಕೂ ಸಂಬಂಧವಿದೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿದ್ದು, ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.