
ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಹೆಚ್.ಎಂ.) ಅಡಿ ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎನ್.ಹೆಚ್.ಎಂ. ಸಿಬ್ಬಂದಿಗೆ ಆರೋಗ್ಯ ಇಲಾಖೆ 60 ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮೆ, 10 ಲಕ್ಷ ರೂಪಾಯಿ ಟರ್ಮ್ ವಿಮೆ ಹೊಂದಿರುವ ವಿಮಾ ಕವಚ ಯೋಜನೆ ಜಾರಿಗೊಳಿಸಲಾಗಿದೆ.
ಎನ್.ಹೆಚ್.ಎಂ. ಅಡಿ ನೇರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 25000 ಸಿಬ್ಬಂದಿಗೆ ಇದರಿಂದ ಅನುಕೂಲವಾಗಲಿದೆ. ಸಿಬ್ಬಂದಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಕ್ಷೇಮಾಭಿವೃದ್ಧಿ ಖಚಿತಪಡಿಸಲು ವೈಯಕ್ತಿಕ ಅಪಘಾತ ವಿಮೆ ಸೇವೆಯನ್ನು ಪರಿಚಯಿಸಲಾಗಿದೆ.
ಎನ್.ಹೆಚ್.ಎಂ. ಮತ್ತು ಆಕ್ಸಿಸ್ ಬ್ಯಾಂಕ್ ಒಡಂಬಡಿಕೆಗೆ ಸಹಿ ಹಾಕಿದ್ದು, ಈ ವಿಮಾ ಯೋಜನೆಗೆ ಉದ್ಯೋಗಿಗಳು ಯಾವುದೇ ಪ್ರೀಮಿಯಂ ಭರಿಸುವ ಅವಶ್ಯಕತೆ ಇರುವುದಿಲ್ಲ. ಉದ್ಯೋಗಿಯ ವೇತನ ಖಾತೆಗೆ ಮೊದಲ ವೇತನ ಜಮೆಯಾದ 15 ದಿನಗಳ ನಂತರ ವಿಮಾನ ರಕ್ಷಣೆ ಚಾಲ್ತಿಗೆ ಬರುತ್ತದೆ.
28,400 ಅನುಮೋದಿತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ 25000 ನೇರ ಗುತ್ತಿಗೆ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. 60 ಲಕ್ಷ ರೂಪಾಯಿ ವೈಯಕ್ತಿಕ ಅಪಘಾತ ವಿಮೆ ರಕ್ಷಣೆ ಒದಗಿಸಲಾಗಿದೆ. ಕರ್ತವ್ಯದ ವೇಳೆ ಅಥವಾ ಕರ್ತವ್ಯ ಮುಗಿದ ನಂತರ ಅಪಘಾತದಿಂದ ಸಂಭವಿಸುವ ಸಾವಿಗೆ ಸಂಪೂರ್ಣ ವಿಮಾ ರಕ್ಷಣೆ ಇರಲಿದೆ.