
ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(NHM) ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಿ ಸೂಕ್ತ ಅನುದಾನ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ.
ಎನ್.ಹೆಚ್.ಎಂ. ಅಡಿ ಮೂರರಿಂದ ಐದು ವರ್ಷ ಕಾರ್ಯನಿರ್ವಹಿಸಿದವರಿಗೆ ಶೇಕಡ 5ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. 5ರಿಂದ 10 ವರ್ಷ ಕಾರ್ಯನಿರ್ವಹಿಸಿದವರಿಗೆ ಶೇಕಡ 10ರಷ್ಟು, 10 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿರುವವರಿಗೆ 15% ರಷ್ಟು ವೇತನ ಹೆಚ್ಚಳ ಮಾಡಲಾಗಿದೆ.
ಒಳಗುತ್ತಿಗೆ ಆಧಾರದಲ್ಲಿ 17,055 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಇವರೆಲ್ಲರಿಗೂ ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಲು 5796.21 ಲಕ್ಷ ರೂ. ಅನುದಾನ ಅಗತ್ಯವಿದೆ. ಲಭ್ಯವಿರುವ ಅನುದಾನದಿಂದ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸೂಚನೆ ನೀಡಲಾಗಿದೆ.
ಅಖಿಲ ಭಾರತ ಆರೋಗ್ಯ ಇಲಾಖೆ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಶ್ವರಾಧ್ಯ ಹೆಚ್. ಯಮೋಜಿ ಅವರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಐದು ವರ್ಷಗಳ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಶೇಕಡ 15ರಷ್ಟು ವೇತನ ಹೆಚ್ಚಳ ಆದೇಶದಲ್ಲಿ ವಿಧಿಸಿರುವ ಕೆಲವು ಷರತ್ತುಗಳಿಂದ ಸಾವಿರಾರು ನೌಕರರಿಗೆ ತೊಂದರೆಯಾಗಲಿರುವ ಹಿನ್ನೆಲೆಯಲ್ಲಿ ಷರತ್ತುಗಳನ್ನು ಹಿಂಪಡೆಯಬೇಕು. ಎಲ್ಲ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಬೇಕು. ಸೇವಾ ಭದ್ರತೆ, ವಿಮೆ, ಕೃಪಾಂಕ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.