
ಬೆಂಗಳೂರು: ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಹೆಚ್.ಎಂ.) ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ 25000ಕ್ಕೂ ಅಧಿಕ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರಿತ ನೌಕರರಿಗೆ ಶೀಘ್ರದಲ್ಲೇ ವೇತನವನ್ನು ಶೇಕಡ 15ರಷ್ಟು ಹೆಚ್ಚಳ ಮಾಡಲಾಗುವುದು. ಎರಡು ದಿನದಲ್ಲಿ ಆದೇಶ ಹೊರ ಬೀಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯೆ ಕೆ. ಪೂರ್ಣಿಮಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇನ್ನು ಎರಡು ತಿಂಗಳಲ್ಲಿ ಎನ್.ಹೆಚ್.ಎಂ. ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎನ್.ಹೆಚ್.ಎಂ. ಯೋಜನೆಗೆ 41,000 ನೌಕರರ ಅಗತ್ಯವಿದ್ದು, ಸದ್ಯ 21,542 ಮಂದಿ ಗುತ್ತಿಗೆ ಆಧಾರದಲ್ಲಿ, 3494 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ನೌಕರರ ಸಂಘದೊಂದಿಗೆ ಚರ್ಚೆ ನಡೆಸಿ ಅವರ ಬೇಡಿಕೆಗಳಾದ ರಜೆ ಸೌಲಭ್ಯ, ಜಿಲ್ಲೆಯೊಳಗೆ ವರ್ಗಾವಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದು, ಇನ್ನು ಎರಡು ದಿನದಲ್ಲಿ ಆದೇಶ ಹೊರಬೀಳಲಿದೆ ಎಂದು ಹೇಳಿದ್ದಾರೆ.