
ಬೆಂಗಳೂರು: ಬೆಲೆ ಏರಿಕೆ ಬಿಸಿ ಬೆನ್ನಲ್ಲೇ ರಾಜ್ಯದಲ್ಲಿ ಟೋಲ್ ಸುಂಕ ಮತ್ತಷ್ಟು ಹೆಚ್ಚಾಗಲಿದೆ. ಏಪ್ರಿಲ್ 1ರಿಂದ ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಟೋಲ್ ಸುಂಕ ಶೇ.3ರಿಂದ ಶೇ.5ರಷ್ಟು ಹೆಚ್ಚಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ಈ ಮೂಲಕ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಗ್ ಶಾಕ್ ನೀಡಿದೆ.
ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿಯ ಬೆಂಗಳೂರು-ಮೈಸೂರು, ನಂಗ್ಲಿ ಬೆಂಗಳೂರು-ತಿರುಪತಿ, ಬಾಗೇಪಲ್ಲಿ ಬೆಂಗಳೂರು-ಹೈದರಾಬಾದ್, ಸಾದಹಳ್ಳಿ ಬೆಂಗಳೂರು ವಿಮನ ನಿಲ್ದಾಣ ರಸ್ತೆ, ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ-ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಟೋಲ್ ಪ್ಲಾಜಾಗಳು ಸೇರಿದಂತೆ 66 ಟೋಲ್ ಪ್ಲಾಜಾಗಳಲ್ಲಿ ಟೋಲ್ ಸುಂಕ ಹೆಚ್ಚಾಗಲಿವೆ ಎಂದು ತಿಳಿದುಬಂದಿದೆ.
ಇನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಸ್ತೆ ಬಳಕೆದಾರರಿಗೆ ಕೆಲ ರಿಯಾಯಿತಿಗಳನ್ನು ನೀಡುವ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದರು.