ಕೊರೊನಾ ಸಾಂಕ್ರಾಮಿಕದ ಹೊಡೆತದಿಂದ ತತ್ತರಿಸಿದ್ದ ಇಡೀ ಜಗತ್ತು ಕೊಂಚ ಚೇತರಿಸಿಕೊಂಡಿದೆ. ಅಷ್ಟರಲ್ಲಾಗಲೇ ಮತ್ತೊಂದು ಸಾಂಕ್ರಾಮಿಕ ರೋಗ ಖಚಿತ ಎಂದು ಬ್ರಿಟನ್ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ. ಬ್ರಿಟನ್‌ನ ಮಾಜಿ ಮುಖ್ಯ ವೈಜ್ಞಾನಿಕ ಸಲಹೆಗಾರ ಸರ್ ಪ್ಯಾಟ್ರಿಕ್ ವ್ಯಾಲೆನ್ಸ್, ಮತ್ತೊಂದು ಸಾಂಕ್ರಾಮಿಕ ರೋಗದ ಆಗಮನ ಖಚಿತ, ಸರ್ಕಾರ ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.
ಮುಂಬರುವ ಬ್ರಿಟನ್ ಚುನಾವಣೆ ಮಾತ್ರವಲ್ಲ, ಇಂತಹ ನಿರ್ಣಾಯಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ವ್ಯಾಲೆನ್ಸ್ ಅವರ ಪ್ರಕಾರ ಮುಂಬರುವ ಇಂತಹ ಮಾರಕ ರೋಗಗಳನ್ನು ಮೊದಲೇ ಪತ್ತೆ ಮಾಡಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಇದು ಅತ್ಯಂತ ಮಹತ್ವದ ವಿಷಯ.
2021 ರಲ್ಲಿ ಕೂಡ ವ್ಯಾಲೆನ್ಸ್, G7 ನಾಯಕರಿಗೆ ಪೆಂಡಮಿಕ್ ಕುರಿತಾದ ಕಿವಿಮಾತುಗಳನ್ನು ಹೇಳಿದ್ದರು. ಸುಲಭವಾಗಿ ಲಭ್ಯವಿರುವ ರೋಗನಿರ್ಣಯ ವಿಧಾನ, ಲಸಿಕೆ ಮತ್ತು ಚಿಕಿತ್ಸೆಗಳ ಮೂಲಕ COVID-19 ಸಾಂಕ್ರಾಮಿಕದಂತಹ ಪರಿಸ್ಥಿತಿಯನ್ನು ನಿಭಾಯಿಸಬಹುದು ಅನ್ನೋದು ಅವರ ಅಭಿಪ್ರಾಯ. ಆದರೆ ಈ ಸುಧಾರಣೆಗಳಿಗೆ ಗಮನಾರ್ಹವಾದ ಅಂತರಾಷ್ಟ್ರೀಯ ಸಮನ್ವಯತೆಯ ಅಗತ್ಯವಿದೆ ಎಂದವರು ಹೇಳಿದ್ದಾರೆ.
2023ರ ವೇಳೆಗೆ ಕೊರೊನಾದ ಭೀಕರತೆಯನ್ನೇ ಎಲ್ಲರೂ ಮರೆತಂತಿರುವುದು ಅಚ್ಚರಿ ಮೂಡಿಸಿದೆ. ಹಾಗಾಗಿ ಸಾಂಕ್ರಾಮಿಕ ಕಾಯಿಲೆಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲೇಬೇಕೆಂದು ಅವರು ಒತ್ತಾಯಿಸಿದ್ದಾರೆ.
ಯುದ್ಧ ನಡೆಯಲಿ ಬಿಡಲಿ ಪ್ರತಿರಾಷ್ಟ್ರಕ್ಕೂ ಸೇನೆ ಇರಲೇಬೇಕು. ಪೆಂಡಮಿಕ್ ಕುರಿತಾದ ಸನ್ನದ್ಧತೆಯನ್ನು ಅದೇ ರೀತಿಯಲ್ಲಿ ಪರಿಗಣಿಸಬೇಕು. ಸಾಂಕ್ರಾಮಿಕ ರೋಗದ ಯಾವುದೇ ಚಿಹ್ನೆ ಇಲ್ಲದಿದ್ದಾಗ ಅದನ್ನು ಹಗುರವಾಗಿ ಪರಿಗಣಿಸಬಾರದು ಎಂದು ವ್ಯಾಲೆನ್ಸ್ ಎಚ್ಚರಿಕೆ ನೀಡಿದ್ದಾರೆ.
ಸಾಂಕ್ರಾಮಿಕ ಒಪ್ಪಂದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ವಿಳಂಬ ಮಾಡುತ್ತಿರುವುದನ್ನು ಸಹ ಅವರು ಉಲ್ಲೇಖಿಸಿದ್ದಾರೆ. ಈ ಸಮಸ್ಯೆಯನ್ನು G7 ಮತ್ತು G20 ಅಜೆಂಡಾಗಳಿಂದ ತೆಗೆದು ಹಾಕಿದರೆ ಕೋವಿಡ್ ಸಮಯದಲ್ಲಿ ಎದುರಿಸಿದ ಅದೇ ಪರಿಸ್ಥಿಯಲ್ಲಿರುತ್ತೇವೆ ಎಂದವರು ಹೇಳಿದ್ದಾರೆ. ಬ್ರಿಟನ್ ಸರ್ಕಾರದ ಧೂಮಪಾನ ವಿರೋಧಿ ಮಸೂದೆಯನ್ನು ಅವರು ಶ್ಲಾಘಿಸಿದ್ದಾರೆ, ಆದರೆ ಚುನಾವಣೆಯ ಮೊದಲು ಅದನ್ನು ಅಂಗೀಕರಿಸಲಾಗುವುದಿಲ್ಲ ಎಂದು ನಿರಾಸೆ ಸಹ ವ್ಯಕ್ತಪಡಿಸಿದ್ದಾರೆ.