ಮುಂದಿನ ಕೋವಿಡ್ ಲಸಿಕೆ ಮಾತ್ರೆ ರೂಪದಲ್ಲಿ ಬರಲಿದೆ. ಈಗಾಗಲೇ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಲು ಇಸ್ರೇಲ್ ಕಂಪನಿ ಭಾರತದ ಸಂಪರ್ಕದಲ್ಲಿದೆ ಎಂದು ಹೇಳಲಾಗಿದೆ.
ಇಂಜೆಕ್ಷನ್ ಮೂಲಕ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಮೂಗಿನ ಮೂಲಕ ನೇಸಲ್ ವ್ಯಾಕ್ಸಿನ್ ಕೋವಿಡ್ ಲಸಿಕೆ ಕೂಡ ಶೀಘ್ರವೇ ಬರಲಿದೆ ಎನ್ನಲಾಗಿದೆ. ಈಗ ಮಾತ್ರೆ ರೂಪದಲ್ಲಿ ಕೂಡ ಲಸಿಕೆ ಕ್ಲಿನಿಕಲ್ ಪ್ರಯೋಗಕ್ಕೆ ಒತ್ತು ನೀಡಲಾಗಿದೆ.
ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಟೆಲ್ ಅವೀವ್‌ನಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲು ಒರಾಮೆಡ್ ಫಾರ್ಮಾಸ್ಯುಟಿಕಲ್ಸ್ ಎಂಬ ಇಸ್ರೇಲಿ ಕಂಪನಿಯು ಸಜ್ಜಾಗಿರುವುದರಿಂದ ಮುಂದಿನ ಕೋವಿಡ್ -19 ಲಸಿಕೆಗಳು ಮಾತ್ರೆ ರೂಪದಲ್ಲಿ ಬರಬಹುದಾಗಿದೆ.
ಇಸ್ರೇಲಿ ಫಾರ್ಮಾಸ್ಯುಟಿಕಲ್ಸ್ ಕಂಪನಿಯು ಭಾರತ ಮೂಲದ ಪ್ರೇಮಾಸ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ನಿರೀಕ್ಷಿತ ಲಸಿಕೆಯ ಏಕ-ಡೋಸ್ ಆಧಾರಿತ ಓರಲ್ ವರ್ಷನ್ ಅಭಿವೃದ್ಧಿಪಡಿಸಿದೆ. ಲಸಿಕೆ ಪ್ರಯೋಗಗಳ ಸಮಯದಲ್ಲಿ ಹಂದಿಗಳಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ ಎಂದು ಈ ಹಿಂದೆ ಘೋಷಿಸಿತ್ತು.
ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಮೌಖಿಕ ಲಸಿಕೆ ಸೀಮಿತ ಮೂಲಸೌಕರ್ಯ ಹೊಂದಿರುವ ದೇಶಗಳಿಗೆ ವ್ಯಾಕ್ಸಿನೇಷನ್ ವೇಗಗೊಳಿಸಲು ಸಹಾಯ ಮಾಡುತ್ತದೆ. ಇಸ್ರೇಲಿ ನಿರ್ಮಿತ ಮಾತ್ರೆ ರೂಪದ ಕೋವಿಡ್ ಲಸಿಕೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ ಮತ್ತು ಚುಚ್ಚುಮದ್ದನ್ನು ನೀಡಲು ಅಗತ್ಯವಿರುವ ಕೋಲ್ಡ್-ಸ್ಟೋರೇಜ್ ಸೆಟಪ್, ಮಾನವಶಕ್ತಿ ಪ್ರಯತ್ನಗಳ ಅಗತ್ಯವಿರುವುದಿಲ್ಲ. ಇದು ‘ಗೇಮ್ ಚೇಂಜರ್’ ಆಗಿರಬಹುದು ಎಂದು ಒರಾಮೆಡ್ ಸಿಇಒ ನಾಡವ್ ಕಿಡ್ರಾನ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ಉಲ್ಲೇಖಿಸಿದೆ.
ಏತನ್ಮಧ್ಯೆ, ಪ್ರಸ್ತುತ ದೇಶದಲ್ಲಿ ಬಳಸುತ್ತಿರುವ ಲಸಿಕೆಗಳನ್ನು ಎರಡರಿಂದ ಎಂಟು ಡಿಗ್ರಿ ಸೆಲ್ಸಿಯಸ್ ತಾಪಮಾನದ ವ್ಯಾಪ್ತಿಯಲ್ಲಿ ಸಂಗ್ರಹಿಸಬೇಕಾಗಿದೆ ಎಂದು ಸರ್ಕಾರ ಇತ್ತೀಚೆಗೆ ಹೇಳಿದೆ.
ಆರೋಗ್ಯ ಸಚಿವರು ಲಿಖಿತ ಉತ್ತರ ನೀಡಿ, ದೇಶದಲ್ಲಿ 296 ವಾಕ್-ಇನ್ ಕೂಲರ್‌ಗಳು ಮತ್ತು 57,640 ಐಸ್ ಲೇನ್ಡ್ ರೆಫ್ರಿಜರೇಟರ್‌ಗಳಿವೆ. ಕೋವಿಡ್ ವಿರೋಧಿ ಲಸಿಕೆಗಳನ್ನು ಸಂಗ್ರಹಿಸಲು ಅಸ್ತಿತ್ವದಲ್ಲಿರುವ ಕೋಲ್ಡ್ ಸ್ಟೋರೇಜ್ ಸೌಲಭ್ಯವು ಸಾಕಾಗುತ್ತದೆ. ನ್ಯಾಷನಲ್ ಕೋಲ್ಡ್ ಚೈನ್ ಮ್ಯಾನೇಜ್ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡುವ ಕೋಲ್ಡ್ ಚೈನ್ ಉಪಕರಣಗಳ ಡಿಜಿಟಲ್ ಡೇಟಾಬೇಸ್ ಆಗಿದೆ ಎಂದು ತಿಳಿಸಿದ್ದರು.