ಕೋವಿಡ್ ಎರಡನೇ ಅಲೆಯ ಆಘಾತದಿಂದ ದೇಶದ ಜನತೆ ಇನ್ನೂ ಸುಧಾರಿಸಿಕೊಳ್ಳುತ್ತಿರುವಾಗಲೇ ಸೋಂಕಿನ ಮೂರನೇ ಅಲೆ ಕುರಿತಂತೆ ಭಾರೀ ಭಯ ಸೃಷ್ಟಿಯಾಗಿದೆ.
ಮುಂದಿನ 100-125 ದಿನಗಳು ಬಹಳ ಮುಖ್ಯವಾಗಿದ್ದು, ಕೋವಿಡ್ ಎರಡನೇ ಅಲೆ ಎಲ್ಲೆಡೆ ಕಡಿಮೆಯಾಗಿದ್ದರೂ ಸಹ ದೇಶದ 73 ಜಿಲ್ಲೆಗಳಲ್ಲಿ ಇನ್ನೂ ಪ್ರತಿನಿತ್ಯ 100 ಹೊಸ ಪ್ರಕರಣಗಳು ದಾಖಲಾಗುತ್ತಿರುವ ಕಾರಣ ಎಚ್ಚರಿಕೆಯಿಂದ ಇರಬೇಕಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.
“ದೇಶದಲ್ಲಿ ಕೊರೊನಾ ಸೋಂಕಿನ ಕೇಸುಗಳು ಕಡಿಮೆಯಾಗುವ ಪ್ರಮಾಣ ಇತ್ತೀಚೆಗೆ ತಗ್ಗುತ್ತಿದೆ. ಈ ಕಾರಣದಿಂದ ಇದು ಮೂರನೇ ಅಲೆಯ ಎಚ್ಚರಿಕೆಯನ್ನಾಗಿ ತೆಗೆದುಕೊಳ್ಳಬೇಕಿದೆ” ಎಂದು ಆರೋಗ್ಯ ಇಲಾಖೆಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಮಾರ್ಮಿಕ ಹೇಳಿಕೆ ನೀಡಿದ ಸಿಎಂ ಯಡಿಯೂರಪ್ಪ
“ಬಹಳ ಪ್ರದೇಶಗಳಲ್ಲಿ ಪರಿಸ್ಥಿತಿಯು ಹದಗೆಡುತ್ತಾ ಸಾಗಿದೆ. ಒಟ್ಟಾರೆಯಾಗಿ ಜಗತ್ತು ಈಗ ಕೋವಿಡ್ ಮೂರನೇ ಅಲೆಯತ್ತ ಹೆಜ್ಜೆ ಇಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಕೊಟ್ಟಿರುವ ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಇದು ರೆಡ್ ಸಿಗ್ನಲ್” ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ.
ಇದೇ ವೇಳೆ, ವ್ಯಾಪಕವಾದ ಪರೀಕ್ಷೆಗಳು, ಟ್ರೇಸಿಂಗ್‌ಗಳು ಹಾಗೂ ಲಸಿಕಾ ಕಾರ್ಯಕ್ರಮಗಳ ಮೂಲಕ ಕೋವಿಡ್ ಮೂರನೇ ಅಲೆಯ ಸಾಧ್ಯತೆಯನ್ನು ತಗ್ಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಸೂಚಿಸಿದ್ದಾರೆ.