ಪತ್ರಿಕೆಯಲ್ಲಿ ಬರುವ ಕೆಲವೊಂದು ಜಾಹೀರಾತುಗಳು ಎಲ್ಲರ ಗಮನ ಸೆಳೆಯುತ್ತವೆ. ಅದೇ ರೀತಿ ಈಗ ವ್ಯಕ್ತಿಯೊಬ್ಬ ನೀಡಿರುವ ಜಾಹೀರಾತು ವಿಲಕ್ಷಣ ಕಾರಣಕ್ಕೆ ಸದ್ದು ಮಾಡುತ್ತಿದೆ.
ಅಸ್ಸಾಂನ ವ್ಯಕ್ತಿ ಪತ್ರಿಕೆಯಲ್ಲಿ ಈ ಜಾಹೀರಾತು ನೀಡಿದ್ದಾನೆ ಎಂದು ಹೇಳಲಾಗಿದ್ದು, ಇದನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಜಾಹೀರಾತಿನಲ್ಲಿ 7-9-2022 ರಂದು ಅಸ್ಸಾಂನ ಲುಮ್ದಿಂಗ್ ಬಜಾರ್ ನಲ್ಲಿ ‘ನನ್ನ ಮರಣ ಪತ್ರ’ ವನ್ನು ಕಳೆದುಕೊಂಡಿದ್ದೇನೆ ಎಂದು ಆ ವ್ಯಕ್ತಿ ತಿಳಿಸಿದ್ದಾನೆ. ಅಷ್ಟೇ ಅಲ್ಲ, ಅದರ ನೋಂದಣಿ ಮತ್ತು ಕಳೆದು ಹೋಗಿರುವ ಪ್ರಮಾಣಪತ್ರದ ಕ್ರಮ ಸಂಖ್ಯೆಯನ್ನೂ ನಮೂದಿಸಿದ್ದಾನೆ.
ಇದನ್ನು ಹಂಚಿಕೊಂಡಿರುವ ರೂಪಿನ್ ಶರ್ಮಾ, ಇದು ಭಾರತದಲ್ಲಿ ಮಾತ್ರ ಸಂಭವಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಸಹ ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದು, ಆತ ಸ್ವರ್ಗದಿಂದ ಸಹಾಯ ಕೇಳುತ್ತಿರಬಹುದು ಎಂದು ಹೇಳಿದ್ದಾರೆ.