
ಬೆಂಗಳೂರು: ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಇದೇ ಮೊದಲ ಬಾರಿಗೆ ಎಐ ತಾಂತ್ರಿಕತೆಯ ಮೊಬೈಲ್ ಆಧಾರಿತ ಅಭ್ಯರ್ಥಿ ದೃಢೀಕರಣ ವ್ಯವಸ್ಥೆಯನ್ನು ವಿಧಾನ ಪರಿಷತ್ ನ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬಳಕೆ ಮಾಡಿದೆ.
ಪ್ರಾಧಿಕಾರದ ಇಂಜಿನಿಯರಿಂಗ್ ತಂಡ ಮೊಬೈಲ್ ಬೇಸ್ಡ್ ಕ್ಯಾಂಡಿಡೇಟ್ ಅಥೆಂಟಿಕೇಶನ್ ವ್ಯವಸ್ಥೆಯನ್ನು ಸಿದ್ಧಪಡಿಸಿದೆ. ಕಂಪ್ಯೂಟರ್ ಆಪರೇಟರ್ ಮತ್ತು ಇತರೆ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಪ್ರಯೋಗಾರ್ಥವಾಗಿ ಇದನ್ನು ಬಳಕೆ ಮಾಡಲಾಗಿದ್ದು, ಮೊದಲ ಪ್ರಯತ್ನ ಯಶಸ್ವಿಯಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಸ್ಮಾರ್ಟ್ ಫೋನ್ ಬಳಕೆ ಮಾಡಿಕೊಂಡು ಅವರ ಫೋಟೋ ಸೆರೆ ಹಿಡಿಯಲಾಗುವುದು. ಇದು ಕೂಡಲೇ ಪ್ರಾಧಿಕಾರದ ಡೇಟಾ ಸರ್ವರ್ ನೊಂದಿಗೆ ಸಂಪರ್ಕಗೊಂಡು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಿರುವ ಭಾವಚಿತ್ರದೊಂದಿಗೆ ತಾಳೆ ಮಾಡಿ ನೈಜತೆ ದೃಢಪಡಿಸುತ್ತದೆ. ಮುಂದಿನ ಪರೀಕ್ಷೆಗಳಲ್ಲಿಯೂ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.