ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನವನ್ನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ರಾಜಕೀಯ ಜೀವನದಲ್ಲಿ ತಮ್ಮ ವರ್ಚಸ್ಸನ್ನ ವಾಪಸ್ ಪಡೆಯಲು ಇನ್ನಿಲ್ಲದ ಗಾಳವನ್ನ ಬಳಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ಗೋಕಾಕ್ ಸಾಹುಕಾರನಿಗೆ ಸಹೋದರರು ಕೆಲ ಸಲಹೆಗಳನ್ನ ನೀಡಿದ್ದು ರಮೇಶ್ ಇದೀಗ ಪ್ರತಿಷ್ಠೆಯನ್ನ ವಾಪಸ್ ಪಡೆಯಲು ಹೊಸ ರಣತಂತ್ರ ಹೂಡಿದ್ದಾರೆ ಎನ್ನಲಾಗಿದೆ.
ತಡರಾತ್ರಿಯೇ ಬೆಂಗಳೂರಿಗೆ ಬಂದು ತಲುಪಿರುವ ರಮೇಶ್ ಜಾರಕಿಹೊಳಿ ಇಂದು ಹಾಗೂ ನಾಳೆ ಬೆಂಗಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿಗೆ ರಮೇಶ್ ಜಾರಕಿಹೊಳಿ ಕಾತುರರಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ರನ್ನೂ ಭೇಟಿಯಾಗಲು ರಮೇಶ್ ನಿರ್ಧರಿಸಿದ್ರು. ಆದರೆ ಕಟೀಲ್ ಸಹೋದರನ ಅಗಲಿಕೆ ಹಿನ್ನೆಲೆ ಕೊನೆ ಕ್ಷಣದಲ್ಲಿ ಈ ಭೇಟಿ ರದ್ದಾಗಿದೆ.
ಬೆಂಗಳೂರಲ್ಲಿ ಆಪ್ತರು ಹಾಗೂ ಸ್ನೇಹಿತರನ್ನ ಭೇಟಿಯಾಗಲಿರೋ ರಮೇಶ್ ನಾಳೆ ರಾತ್ರಿಯೇ ಗೋಕಾಕ್ಗೆ ವಾಪಸ್ಸಾಗಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರೋ ರಮೇಶ್ರ ಮನವೊಲಿಸುವಲ್ಲಿ ಸಹೋದರ ಲಖನ್ ಹಾಗೂ ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಜುಲೈ 1 ನೇ ತಾರೀಖಿನಂದು ಗೋಕಾಕ್ನಲ್ಲಿ ವೈದ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಜೀವನದ ಬಗ್ಗೆ ಮಹತ್ವದ ನಿರ್ಣಯ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.