ಆಂಬುಲೆನ್ಸ್ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಮದುವೆಯಾಗಿದ್ದ. ಈ ಸಂತಸದಲ್ಲಿದ್ದ ಚಾಲಕ, ತನ್ನ ಪತ್ನಿ ಹಾಗೂ ಸ್ನೇಹಿತರನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಊರೆಲ್ಲ ಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನಿಗೆ ಸದ್ಯ ಸಂಕಷ್ಟ ಎದುರಾಗಿದೆ.
ಈ ನವಂದಪತಿ ಆಂಬುಲೆನ್ಸ್ ನಲ್ಲಿ ಕೇರಳದ ಕಯಮುಕಲಂ ಹತ್ತಿರವಿರುವ ಕಟ್ಟನಂನಲ್ಲಿನ ವರನ ಮನೆಗೆ ತೆರಳಿದ್ದಾರೆ. ಈ ಆಂಬುಲೆನ್ಸ್ ನಲ್ಲಿ ಸ್ನೇಹಿತರು ಕೂಡ ಇದ್ದರು. ಇವರೆಲ್ಲ ದಾರಿ ಮಧ್ಯೆ ಆಂಬುಲೆನ್ಸ್ ನಲ್ಲಿ ಜೋರಾಗಿ ಹಾಡು ಹಾಕಿ ಸಂಭ್ರಮಿಸಿ ನೃತ್ಯ ಮಾಡಿದ್ದು, ಸೈರನ್ ಹಾಕಿಕೊಂಡು ಜನರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ಆಂಬುಲೆನ್ಸ್ ಚಾಲಕರ ಸಂಘ ದೂರು ದಾಖಲಿಸಿತ್ತು. ಜನರ ಸೇವೆಗೆ ಬಳಕೆಯಾಗಬೇಕಿದ್ದ ಆಂಬುಲೆನ್ಸ್ ನ್ನು ಈ ಚಾಲಕ ದುರ್ಬಳಕೆ ಮಾಡಿಕೊಂಡು ಸಂಭ್ರಮಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನು ಗಮನಿಸಿದ ಆರ್ ಟಿ ಒ ಕೂಡಲೇ ಪ್ರಕರಣ ದಾಖಲಿಸಿಕೊಂಡು, ಚಾಲಕನ ಲೈಸೆನ್ಸ್ ರದ್ದು ಮಾಡಿದ್ದಾರೆ. ಅಲ್ಲದೇ, ಆ ಆಂಬುಲೆನ್ಸ್ ನ್ನು ಕೂಡ ಸೀಜ್ ಮಾಡಿದ್ದಾರೆ. ಜನರ ಸೇವೆಗಾಗಿ ಇದ್ದ ಆಂಬುಲೆನ್ಸ್ ನ್ನು ತನ್ನ ಸಂಭ್ರಮಕ್ಕೆ ಬಳಸಿದ್ದ ವ್ಯಕ್ತಿ ಈಗ ಸಂಕಷ್ಟ ಅನುಭವಿಸುವಂತಾಗಿದೆ.