ಬೆಂಗಳೂರು: 5 ವರ್ಷಗಳಿಂದ ಪ್ರೀತಿಸಿ ಮನೆಯವರನ್ನೆಲ್ಲ ಒಪ್ಪಿಸಿ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಸಿವಿಲ್ ಇಂಜಿನಿಯರ್ ಅಂಜು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯಪುರನಗರದಲ್ಲಿ ಪತ್ತೆಯಾಗಿದೆ.
ಅಂಜು ಬಿಆರ್ (26) ಮೃತ ಮಹಿಳೆ. ನಾಲ್ಕು ತಿಂಗಳ ಹಿಂದಷ್ಟೇ ಅಂಜು ಹಾಗೂ ಅಂಜುಮ್ ಪಣಿಯಾರ್ ವಿವಾಹವಾಗಿತ್ತು. ಇದೀಗ ಅಂಜು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿಯ ಮನೆಯವರೇ ಅಂಜುವನ್ನು ಹತ್ಯೆಗೈದು ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅಂಜು ಹಾಗೂ ಅರಕಲಗೂಡಿನ ಅಂಜುಮ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರನ್ನು ಮದುವೆಗೆ ಒಪ್ಪಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಯುವತಿ ಪೋಷಕರೇ ಮುಂದೆ ನಿಂತು ವಿವಾಹ ಮಾಡಿಸಿದ್ದರು. ಆದರೆ ಇಂಜಿನಿಯರ್ ಆಗಿದ್ದರೂ ಅಂಜುಗೆ ಪತಿ ಹಾಗೂ ಮನೆಯವರು ಕಿರುಕುಳ ನೀಡುತ್ತಿದ್ದರು.
ಈ ಬಗ್ಗೆ ಅಂಜು ತನ್ನ ತಾಯಿ ಹೇಮಾವತಿ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಮೊನ್ನೆ ರಾತ್ರಿ ತಾಯಿಗೆ ಕರೆ ಮಾಡಿಯೂ ಮಾತನಾಡಿದ್ದ ಮಗಳು ನಿನ್ನೆ ರಾತ್ರಿ ವೇಳೆಗೆ ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಪತಿ ಮನೆಯವರು ಬಿಂಬಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.