ಹಾಸನ : ಮಗಳು ಗಂಡನ ಮನೆಗೆ ಸೇರಿ ಸುಖವಾಗಿ ಬಾಳಲಿ ಎಂಬುವುದು ಪ್ರತಿಯೊಬ್ಬ ತಂದೆ – ತಾಯಿಯ ಆಸೆ ಹಾಗೂ ಕನಸಾಗಿರುತ್ತದೆ. ಪ್ರೀತಿಯಿಂದ ಬೆಳೆಸಿದ್ದ ಮಗಳು, ಗಂಡನ ಮನೆಗೆ ಹೋದ ಎರಡೇ ವಾರದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿದರೆ, ಅವರ ಪರಿಸ್ಥಿತಿ ಏನಾಗಬಾರದು? ಇಂತಹ ಹೃದಯ ವಿದ್ರಾವಕ ಘಟನೆಯೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಅರಕಲಗೂಡು ತಾಲೂಕಿನ ಹೊಳಲಗೋಡು ಎಂಬ ಹಳ್ಳಿಯ ಯುವತಿಯನ್ನು ಪಟ್ಟಣದ ಸಲೀಂ ನಗರದ ಯುವಕನೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ, ಮದುವೆಯಾದ ಎರಡೇ ವಾರದಲ್ಲಿ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊರೊನಾದಿಂದ ಸಾವನ್ನಪ್ಪಿದ್ದ ಗ್ರಾಪಂ ಸದಸ್ಯ: ಆತನ ಸಹೋದರನನ್ನೇ ಅವಿರೋಧ ಆಯ್ಕೆ ಮಾಡಿದ ಗ್ರಾಮಸ್ಥರು
ಫಿಜಾ ಖಾನಂ(22) ಮೃತಪಟ್ಟ ಮಹಿಳೆ. ಕಳೆದ 19 ದಿನಗಳ ಹಿಂದೆಯಷ್ಟೇ ಈ ಮಹಿಳೆಯ ವಿವಾಹವಾಗಿತ್ತು. ಅಷ್ಟರಲ್ಲಿ ಮಗಳ ಸಾವಿನ ಸುದ್ದಿ, ಆಕೆಯ ಪೋಷಕರಿಗೆ ಕೇಳಿ ಬಂದಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
ವರದಕ್ಷಿಣೆ ಕಿರುಕುಳಕ್ಕೆ ನಮ್ಮ ಮಗಳು ಬಲಿಯಾಗಿದ್ದಾಳೆ. ಫಿಜಾ ಖಾನಂ ಸ್ನಾನಕ್ಕೆ ತೆರಳಿದ್ದಾಗ ಗ್ಯಾಸ್ ಗೀಸರ್ ಸ್ಟಾರ್ಟ್ ಮಾಡಿ, ಬಾಗಿಲು ಹಾಕಿ ಕೊಲೆ ಮಾಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿ, ಅಳಿಯ ಶಾಗಿಲ್ ಅಹಮದ್, ಆತನ ಸಹೋದರರು ಹಾಗೂ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪಟ್ಟಣದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.