ತೆಲಂಗಾಣ: ಹುಟ್ಟಿದ ಎಂಟು ದಿನಗಳ ನಂತರ ಪ್ರಾಥಮಿಕ ಇಮ್ಯುನೊ ಡಿಫೀಶಿಯೆನ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ಉಸಿರಾಟದ ತೊಂದರೆಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವಳಿ ಮಕ್ಕಳ ಪ್ರಾಣವನ್ನು ತೆಲಂಗಾಣದ ಸಚಿವ ಕೆ.ಟಿ ರಾಮರಾವ್ (ಕೆಟಿಆರ್) ಉಳಿಸಿದ್ದಾರೆ.
ತೆಲಂಗಾಣದ ಕರ್ನೂಲ್‌ನ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಜೀವವನ್ನು ಉಳಿಸಲು ಸಹಕರಿಸಿದ ಸಚಿವರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಎರಡು ನವಜಾತ ಶಿಶುಗಳಿಗೆ ಉಸಿರಾಟದ ತೊಂದರೆ ಇದ್ದು, ಕರ್ನೂಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ಸಕ್ಕರೆಯ ಮಟ್ಟವು ಕುಸಿಯಿತು ಮತ್ತು ಅವರು ಪ್ರತಿ 10 ರಿಂದ 15 ಸೆಕೆಂಡುಗಳಿಗೆ ಉಸಿರಾಟವನ್ನು ಕಳೆದುಕೊಳ್ಳುತ್ತಿದ್ದರು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ ಎಂದು ಅಂದಿನ ಪರಿಸ್ಥಿತಿಯನ್ನು ನೆನಪಿಸಿಕೊಂಡರು ಮಕ್ಕಳ ತಂದೆ ಲಕ್ಷ್ಮಣ್ ಟಿ.ಎಚ್.
ಈ ಸಂದರ್ಭದಲ್ಲಿ ಲಕ್ಷ್ಮಣ್ ಅವರು ಕೆಟಿಆರ್ ಸಹಾಯ ಕೇಳಿದರು. ಆಗ ಅವರು ವಾರಂಗಲ್‌ನಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದರು. ಮಾತ್ರವಲ್ಲದೆ ಚಿಕಿತ್ಸೆಗೆ 50 ಸಾವಿರ ರೂ. ರಿಯಾಯ್ತಿ ಮಾಡಿಕೊಟ್ಟರು. ಇದರಿಂದ ಒಂದೂವರೆ ಲಕ್ಷ ರೂಪಾಯಿಯಲ್ಲಿ ಶಿಶುಗಳಿಗೆ ಚಿಕಿತ್ಸೆ ಸಿಕ್ಕಿದೆ. ಮಕ್ಕಳು ಉಸಿರಾಡುತ್ತಿದ್ದು, ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಶಿಶುಗಳ ಫೋಟೋ ಹಂಚಿಕೊಂಡಿರುವ ಸಚಿವ ಕೆಟಿಆರ್, “ಆ ಮಕ್ಕಳು ಆರೋಗ್ಯವಾಗಿರುವುದನ್ನು ನೋಡುವುದಕ್ಕಿಂತ ಹೆಚ್ಚಿನ ತೃಪ್ತಿ ಬೇರೆ ಯಾವುದೂ ಇಲ್ಲ” ಎಂದಿದ್ದಾರೆ.