ಸೂರತ್ ನಲ್ಲಿ ನಡೆದ ಘಟನೆಯೊಂದರಲ್ಲಿ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ ನಂತರ ಕಟ್ಟಡದಿಂದ ಎಸೆದಿದ್ದರಿಂದ ನವಜಾತ ಶಿಶು ಜನಿಸಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ.
ಮಗು ಜನಿಸಿದ ಕೆಲವೇ ಕ್ಷಣಗಳ ನಂತರ ಅದರ ತಾಯಿಯಾದ 15 ವರ್ಷದ ಬುಡಕಟ್ಟು ಬಾಲಕಿ ಎರಡು ಅಂತಸ್ತಿನ ಕಟ್ಟಡದ ಮೇಲಿಂದ ಮಗುವನ್ನು ಎಸೆದಿದ್ದು, ನವಜಾತ ಹೆಣ್ಣು ಮಗು ಸಾವನ್ನಪ್ಪಿದೆ.
ಬಾಲಕಿಯ ಮೇಲೆ ಸಮೀಪದಲ್ಲೇ ವಾಸವಾಗಿದ್ದ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದ್ದು, ಆತನನ್ನು ಬಂಧಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.
ಮಂಗಳವಾರ ಬೆಳಿಗ್ಗೆ, ಬಾಡಿಗೆದಾರರಲ್ಲಿ ಒಬ್ಬನಾದ ವ್ಯಕ್ತಿ ತನ್ನ ಕೋಣೆಯ ಹೊರಗೆ ನವಜಾತ ಮಗುವಿನ ದೇಹವನ್ನು ಗಮನಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆರಂಭದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ನಂತರ, ಪೊಲೀಸರು ತಾಯಿಯೊಂದಿಗೆ ಇರುವ 15 ವರ್ಷದ ಬಾಲಕಿಯ ಮನೆಗೆ ತೆರಳಿದ್ದಾರೆ. ಕಟ್ಟಡದ ಟೆರೇಸ್ ನಲ್ಲಿ ಮಹಿಳೆ ಮತ್ತು ಅವರ ಚಿಕ್ಕ ಮಗಳು ತಂಗಿರುವ ಸಣ್ಣ ಕೋಣೆಯನ್ನು ಗಮನಿಸಿದ್ದಾರೆ. ಆರಂಭದಲ್ಲಿ ಮಗುವಿನ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದ ಮಹಿಳೆ, 15 ವರ್ಷದ ಹುಡುಗಿ ಬೆಡ್ ಶೀಟ್‌ನಲ್ಲಿ ರಕ್ತದ ಕಲೆಗಳೊಂದಿಗೆ ಮಲಗಿರುವುದನ್ನು ಗಮನಿಸಿ ಕೇಳಿದಾಗ ವಿಚಾರಣೆಗೆ ಮಣಿದು ತನ್ನ ಮಗಳು ಮುಂಜಾನೆ ನವಜಾತ ಶಿಶುವಿಗೆ ಜನ್ಮ ನೀಡಿದ್ದಾಳೆ ಎಂದು ಒಪ್ಪಿಕೊಂಡಿದ್ದಾಳೆ.
ಹುಡುಗಿಯೊಂದಿಗೆ ಮಾತನಾಡಿದಾಗ ಅವಳು ಕೂಡ ತಪ್ಪೊಪ್ಪಿಕೊಂಡಿದ್ದಾಳೆ. ಅವಳು ಒಬ್ಬಂಟಿಯಾಗಿರುವಾಗ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದ ಸ್ನೇಹಿತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿಸಿದ್ದಾಳೆ. ಚಿಕಿತ್ಸೆಗಾಗಿ ಅಪ್ರಾಪ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಇನ್ನೂ ಗಂಭೀರ ಸ್ಥಿತಿಯಲ್ಲಿರುವುದರಿಂದ ಆಕೆಯನ್ನು ಇನ್ನೂ ಬಂಧಿಸಲಾಗಿಲ್ಲ.
ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಗುರುತಿಸಿ ವಿಚಾರಣೆ ನಡೆಸುತ್ತಿದ್ದಾರೆ. ರಕ್ತದ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ತಾಯಿ ಮನೆಗೆಲಸದವಳಾಗಿ ದುಡಿದು ಸಂಸಾರ ನಡೆಸುತ್ತಾಳೆ. ಕಳೆದೆರಡು ತಿಂಗಳಿಂದ ಬಾಲಕಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.