ಅಸ್ಸಾಂ: ನವಜಾತ ಶಿಶು ಹುಟ್ಟುತ್ತಲೇ ಸಾವನ್ನಪ್ಪಿತ್ತು ಎಂದು ವೈದ್ಯರು ಘೋಷಿಸಿದ್ದರು. ದು:ಖದ ಮಡುವಲ್ಲೇ ಪೋಷಕರು ಮೃತ ಮಗುವಿನ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಕರೆದೊಯ್ಯುತ್ತಿದ್ದಂತೆ ಮಗು ಕಣ್ತೆರೆದು ಅಳಲು ಆರಂಭಿಸಿದ ಘಟನೆ ಅಸ್ಸಾಂ ನ ಸಿಲ್ಚಾರ್ ನಲ್ಲಿ ನಡೆದಿದೆ.
ತುಂಬುಗರ್ಭಿಣಿ ಪತ್ನಿಯನ್ನು ರತನ್ ದಾಸ್ ಎಂಬುವವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ತಾಯಿ-ಮಗುವಿನ ಆರೋಗ್ಯದಲ್ಲಿ ಸಮಸ್ಯೆಯಿದೆ. ಯಾರನ್ನಾದರೂ ಒಬ್ಬರನ್ನು ಉಳಿಸಬಹುದು ಎಂದಿದ್ದರು. ಮಹಿಳೆ ಹೆರಿಗೆ ಮಾಡಿಸಲು ವೈದ್ಯರು ಕರೆದೊಯ್ದಿದ್ದಾರೆ. ಹೆರಿಗೆ ಬಳಿಕ ಮಗು ಹುಟ್ಟುತ್ತಲೇ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಂಭತ್ತು ತಿಂಗಳು ಗರ್ಭದಲ್ಲಿ ಧರಿಸಿದ್ದ ತಾಯಿಗೆ ಬರಸಿಡಿಲು ಬಡಿದಂತೆ ಆಘಾತವಾಗಿತ್ತು. ಮಗುವಿನ ಸಾವಿನ ಸುದ್ದಿ ಕೇಳಿ ಕುಟುಂಬದವರೆಲ್ಲರೂ ಕಣ್ಣೀರಲ್ಲಿ ಮುಳುಗಿದ್ದಾರೆ. ಮಗುವಿನ ಮೃತದೇಹವನ್ನು ಪ್ಯಾಕ್ ಮಾಡಿ ಕುಟುಂಬದವರಿಗೆ ವೈದ್ಯರು ಒಪ್ಪಿಸಿದ್ದಾರೆ.
ಮಗುವನ್ನು ಮನೆಗೆ ಕರೆತಂದ ರತನ್ ದಾಸ್ ಹಾಗೂ ಪತ್ನಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಮಗುವಿನ ಮೃತದೇಹವನ್ನು ಸಿಲ್ಚಾರ್ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸುತ್ತಿದ್ದಾಗ ಏಕಾಏಕಿ ಕಣ್ಬಿಟ್ಟ ಮಗು ಅಳಲಾರಂಭಿಸಿದೆ. ಪೋಷಕರಿಗೆ ಅಚ್ಚರಿ ಜೊತೆಗೆ ಸಂತೋಷ. ನಂಬಲೂ ಸಾಧ್ಯವಿಲ್ಲ ಎಂಬಂತ ಸ್ಥಿತಿ. ಮಗು ಮೃತಪಟ್ಟಿದೆ ಎಂದು ವೈದ್ಯರೇ ಘೋಷಿಸಿದ್ದಾರೆ. ಆದರೆ ಈಗ ಮಗು ಅಳುತ್ತಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಮಗು ಬದುಕಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ. ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರ ಗುಂಪು ಆಸ್ಪತ್ರೆಗೆ ಧಾವಿಸಿ ವೈದ್ಯರ ಬೇಜವಾಬ್ದಾರಿ ಖಂಡಿಸಿ ಪ್ರತಿಭಟನೆ ನಡೆಸಿದೆ. ಮಗುವಿನ ಕುಟುಂಬದವರು ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.