
ಬೆಳಗಾವಿ: ನವಜಾತ ಶಿಶುವನ್ನು ಬಿಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಿಗಳ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನವಜಾತ ಶಿಶುವನ್ನು ಬಿಸಾಕಿದ್ದ ಪ್ರಕರಣದಲ್ಲಿ ಪ್ರೇಮಿಗಳ ವಿರುದ್ಧವೇ ಕೊಲೆಕೇಸ್ ದಾಖಲಾದಂತಾಗಿದೆ. ಸಿಮ್ರಾನ್ ಮಾಣಿಕಬಾಯಿ ಹಾಗೂ ಮಹಾಬಳೇಶ್ ಕಾಮೋಜಿ ಆರೋಪಿಗಳು.
ಮಾ.5ರಂದು ಬೆಳಗವೈ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಮನೆಯ ಪಕ್ಕದ ತಿಪ್ಪೆಗುಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ನಡೆಸಿದ್ದರು.
ಒಂದೇ ಗಲ್ಲಿಯ ಸಿಮ್ರಾನ್ ಹಾಗೂ ಮಹಾಬಳೇಶ್ ಕಾಮೋಜಿ ಅನ್ಯಧರ್ಮಿಯರಾಗಿದ್ದು, ಆದರೆ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ದೈಹಿಕ ಸಂಪರ್ಕವೂ ಬೆಳೆದು ಸಿಮ್ರಾನ್ ಗರ್ಭಿಣಿಯಾಗಿದ್ದಳು. ಆದರೆ ಈ ವಿಚಾರ ಇಬ್ಬರ ಮನೆಯವರಿಗೂ ಗೊತ್ತಿರಲಿಲ್ಲ. ಸಿಮ್ರಾನ್ ದಪ್ಪಗಿದ್ದ ಕಾರಣಕ್ಕೆ ಆಕೆ ಗರ್ಭಿಣಿ ಎಂಬುದು ಯಾರಿಗೂ ಗೊತ್ತಾಗಿಯೂ ಇರಲಿಲ್ಲ. ಮಾ.5ರಂದು ಸಿಮ್ರಾನ್ ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮನೆಯ ಬಾತ್ ರೂಂನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಯಾರಿಗೂ ತಿಳಿಯದಂತೆ ಮಗುವನ್ನು ತಿಪ್ಪೆಗುಂಡಿಗೆ ಬಿಸಾಕಿದ್ದಾಳೆ.
ತಿಪ್ಪೆಗುಂಡಿ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ ಹಿನ್ನೆಲೆಯಲ್ಲಿ ಕಿತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನವಜಾತ ಶಿಶುವಿಇನ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ಅಕ್ಕಪಕ್ಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಚಿಕಿತ್ಸೆ ಪಡೆದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಅನುಮಾನದ ಮೇರೆಗೆ ಸಿಮ್ರಾನ್ ಳನ್ನು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ವಿಚಾರಣೆ ವೇಳೆ ಸಿಮ್ರಾನ್ ಹೆರಿಗೆ ಸಂದರ್ಭದಲ್ಲಿ ಮಹಾಬಳೇಶ್ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವುದು ಬೆಳಕಿಗೆ ಬಂದಿದೆ. ಇಬ್ಬರನ್ನು ಬಂಧಿಸಿ ತನಿಖೆ ನಡೆಸಲಾಗಿದೆ.