ಅಂದು ಕ್ರಿಸ್‌ಮಸ್ ಆಗಿತ್ತು. ಐವರು ಯುವ ಸ್ನೇಹಿತರು ಸುತ್ತಾಡಲು ತೆರಳಿದ್ದರು. ಸೈಬಿರಿಯಾದ ಸೊಸ್ನೊವ್ಕೊ ಪಟ್ಟಣವದು. ಭಾರಿ ಹಿಮಮಳೆ ಸುರಿಯುತ್ತಿತ್ತು. ಆದ ಕಾರಣ ತಾಪಮಾನವು ಮೈನಸ್ 20 ಡಿಗ್ರಿ ಸೆಲ್ಸಿಯಸ್‌ಗೆ ಜಾರಿತ್ತು. ಇಂಥ ಕೊರೆಯುವ ಚಳಿಯಲ್ಲಿ ನಾಯಿಮರಿಗಳು ಕಿರುಚಾಡುವಂತಹ ಧ್ವನಿ ಕೇಳಿಬರುತ್ತಿತ್ತು.
ಆಗ ಸ್ನೇಹಿತರಿಗೆ ಮೊದಲು ತಲೆಗೆ ಹೊಳೆದಿದ್ದು, ಯಾವುದೋ ನಾಯಿಯು ಮರಿಗಳನ್ನು ಹಾಕಿ ಹೋಗಿದೆ ಎಂದು. ಕೂಡಲೇ ಅವರು ಹುಡುಕಾಡಿ, ಒಂದು ಮೊಟ್ಟೆಗಳನ್ನು ಶೇಖರಿಸುವ ಬಾಕ್ಸ್ ಕಂಡರು. ಅದರೊಳಗಿಂದಲೇ ಧ್ವನಿ ಬರುತ್ತಿತ್ತು. ಫೋನ್‌ನಲ್ಲಿ ಲೈಟ್ ಆನ್ ಮಾಡಿ ಗಮನಿಸಿದಾಗ ನವಜಾತ ಶಿಶುವು ಗೋಚರಿಸಿತ್ತು.
ಒಂದು ಸಣ್ಣ ಹಾಲು ತುಂಬಿದ ಬಾಟಲಿ, ದಪ್ಪ ಹೊದಿಕೆ ಹೊದ್ದು ಮಲಗಿದ್ದ ನವಜಾತ ಶಿಶುವನ್ನು ಕಂಡು ಯುವಕರು ಖುಷಿಯಾದರು. ಅದನ್ನು ಮುದ್ದಾಡಲು ಆರಂಭಿಸಿದರು. ಆದರೆ, ಸ್ವಲ್ಪ ಸಮಯದ ಬಳಿಕ ಮಗುವನ್ನು ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ಸುತ್ತಲೂ ಯಾರೂ ಕೂಡ ಮಗುವಿಗಾಗಿ ಕಾಯುತ್ತಿರುವುದು ಕಾಣಿಸಲಿಲ್ಲ. ಚಳಿಯಲ್ಲಿ ಮಗುವಿಗೆ ಅಪಾಯವಾಗುವ ಭಯ ಹುಟ್ಟಿದ ಕೂಡಲೇ ಯುವಕರು ಮಗುವನ್ನು ಕಾರಿನಲ್ಲಿ ಮನೆಗೆ ಕರೆದೊಯ್ದರು.
ಡಿಮಿಟ್ರಿ ಮತ್ತು ಅನ್ನಾ ಎನ್ನುವ ಇಬ್ಬರು ತಮ್ಮ ಪೋಷಕರಿಗೆ ವಿಚಾರ ತಿಳಿಸಿದಾಗ ವೈದ್ಯರನ್ನು ಕರೆಸಲಾಯಿತು. ಅದೃಷ್ಟವಶಾತ್ ಮಗುವಿಗೆ ಚಳಿಯ ಬಾಧೆ ತಾಕಿರಲಿಲ್ಲ. ಆರೋಗ್ಯವಾಗಿದ್ದ ಮಗುವನ್ನು ವೈದ್ಯರು ಕೂಡ ಮುದ್ದಾಡಿದರು. ಹೆಣ್ಣುಶಿಶುವಿಗೆ ಕೇವಲ 2 ರಿಂದ 3 ದಿನದ ವಯಸ್ಸಾಗಿದೆ ಎಂದ ವೈದ್ಯರು ಕೂಡ ಸರಕಾರಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರ ತಿಳಿಸಿದರು.
ಸದ್ಯ ಪೋಷಕರ ಪತ್ತೆಗಾಗಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅವರ ವಿರುದ್ಧ ನವಜಾತ ಶಿಶುವಿನ ಹತ್ಯೆ ಯತ್ನದ ಕೇಸ್ ದಾಖಲಾಗಿದೆ. ಡಿಮಿಟ್ರಿ ಹಾಗೂ ಅನ್ನಾ ಅವರ ಪೋಷಕರೇ ಮಗುವನ್ನು ದತ್ತು ಪಡೆದುಕೊಂಡು ಸಾಕಲು ತೀರ್ಮಾನಿಸಿದ್ದಾರೆ. ಹೆಣ್ಣುಮಕ್ಕಳಿಲ್ಲದೇ ಚಡಪಡಿಸುತ್ತಿದ್ದ ನಮಗೆ ಈ ಮಗು ವರದಾನ ಎಂದಿದ್ದಾರೆ ಅವರು.