ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಆಸ್ಪತ್ರೆಗೆ ಸೈಕಲ್ ನಲ್ಲಿ ಹೋಗುವುದನ್ನು ನೋಡಿದ್ದೀರಾ..? ಅದರಲ್ಲೂ ಸ್ವತಃ ತಾನೇ ಸೈಕಲ್ ತುಳಿಯುತ್ತಾ..! ಸಾಧ್ಯವೇ ಇಲ್ಲ ಅಂತೀರಾ..? ಇದು ಸಾಧ್ಯ ಅಂತಾ ಪಾರ್ಲಿಮೆಂಟ್ ಸದಸ್ಯರೊಬ್ಬರು ಸಾಧಿಸಿ ತೋರಿಸಿದ್ದಾರೆ.
ಹೌದು, ನ್ಯೂಜಿಲೆಂಡ್ ಸಂಸದೆ ಜೂಲಿ ಅನ್ನೆ ಜೆಂಟರ್ ಎಂಬುವವರು ಸೈಕಲ್ ತುಳಿದಿದ್ದಾರೆ. ಭಾನುವಾರ ಮುಂಜಾನೆ ವೇಳೆ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ತಮ್ಮ ಬೈಸಿಕಲ್ ಹತ್ತಿದ ಅವರು, ಸಮೀಪದ ಆಸ್ಪತ್ರೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆ ತಲುಪಿದ ಕೇವಲ ಒಂದು ಗಂಟೆಯ ನಂತರ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಪತಿ ಜೊತೆ ಮುಂಜಾನೆ 2 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದ ಜೂಲಿ ಅವರಿಗೆ ನಂತರ ಹೆರಿಗೆ ನೋವು ಇನ್ನೂ ಹೆಚ್ಚಾಗಿದೆ. ಬೆಳಗ್ಗೆ 3.04 ಗಂಟೆ ವೇಳೆಗೆ ಮಗುವಿನ ಜನನವಾಗಿದೆ. ತಾಯಿ-ಮಗು ಇಬ್ಬರು ಕೂಡ ಆರೋಗ್ಯವಾಗಿದ್ದಾರೆ. ತಮ್ಮ ಹೊಸ ಸದಸ್ಯನನ್ನು ಕುಟುಂಬ ಸ್ವಾಗತಿಸಿದೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ಜೂಲಿ ಹಂಚಿಕೊಂಡಿದ್ದು, ಬೈಸಿಕಲ್ ಸವಾರಿಯ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಾರೆ. ಹೆರಿಗೆ ನೋವು ಇರುವಾಗ ಜೂಲಿ ಸೈಕಲ್ ಓಡಿಸಿದ್ದು ಇದೇ ಮೊದಲಲ್ಲ. 2018 ರಲ್ಲಿ ತನ್ನ ಮೊದಲ ಗರ್ಭಾವಸ್ಥೆಯಲ್ಲಿ ಕೂಡ ಈಕೆ ಬೈಸಿಕಲ್ ತುಳಿದಿದ್ದಳು.