ಸಾಮಾನ್ಯವಾಗಿ ಖಾದ್ಯಗಳನ್ನು ವಿವಿಧ ಶೈಲಿಗಳಲ್ಲಿ, ವಿಭಿನ್ನವಾಗಿ ಮಾಡೋದನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡಿರ್ತೀರಾ. ಇದೀಗ ರೆಸ್ಟೋರೆಂಟ್ ವೊಂದು ಮಾಡಿದ ಫ್ರೆಂಚ್ ಫ್ರೈಸ್ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾಗಿದೆ.
ಹೌದು, ಅಮೆರಿಕಾದ ನ್ಯೂಯಾರ್ಕ್‌ನಲ್ಲಿರುವ ರೆಸ್ಟೋರೆಂಟ್ ವೊಂದು ರುಚಿಕರವಾದ ಕರಿದ ಆಲೂಗಡ್ಡೆ ತಿಂಡಿಯನ್ನು ಮಾಡಿದೆ. ಮ್ಯಾನ್‌ಹ್ಯಾಟನ್‌ನಲ್ಲಿ ಇರೋ ಸೆರೆಂಡಿಪಿಟಿ ಹೆಸರಿನ ರೆಸ್ಟೋರೆಂಟ್ ಸಾರ್ವಕಾಲಿಕ ಅತ್ಯಂತ ದುಬಾರಿ ಫ್ರೆಂಚ್ ಫ್ರೈಗಳನ್ನು ತಯಾರಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು ಸೃಷ್ಟಿಸಿದೆ.
ಅತಿ ದುಬಾರಿ ಫ್ರೆಂಚ್ ಫ್ರೈಸ್ ಖಾದ್ಯವನ್ನು ಕ್ರೆಮಾ ಡೆಲಾ ಕ್ರೀಮ್ ಪೊಮ್ಮೆಸ್ ಫ್ರೈಟ್ಸ್ ಎಂದು ಹೆಸರಿಸಲಾಗಿದೆ. ಹೆಸರು ಮಾತ್ರ ಸೊಗಸಾಗಿದೆ. ಆದರೆ, ಖಾದ್ಯದ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ..! ಈ ಖಾದ್ಯದ ಬೆಲೆ ಸುಮಾರು 200 ಡಾಲರ್ (ಅಂದಾಜು ರೂ. 15,800) ನಷ್ಟಿದೆ. ಹೀಗಾಗಿ ನಿಮ್ಮ ಜೇಬು ತೂತಾಗೋದು ಗ್ಯಾರಂಟಿ.
ಅಂದಹಾಗೆ, ಗಿನ್ನಿಸ್ ವಿಶ್ವದಾಖಲೆಯನ್ನು ಸೃಷ್ಟಿಸಿದ ಈ ರೆಸ್ಟೋರೆಂಟ್, ಮುಂಬರುವ ರಾಷ್ಟ್ರೀಯ ಫ್ರೆಂಚ್ ಫ್ರೈ ದಿನವನ್ನು ಸರಿಯಾದ ರೀತಿಯಲ್ಲಿ ಆಚರಿಸಲು ಬಯಸಿದೆ. ಈ ಬಗ್ಗೆ ರೆಸ್ಟೋರೆಂಟ್ ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದೆ.
ಇನ್ನು ಈ ಅತಿ ದುಬಾರಿ ಖಾದ್ಯವನ್ನು ತಯಾರಿಸಲು ಬಳಸಲಾದ ರಹಸ್ಯ ಪದಾರ್ಥಗಳ ವಿವರಗಳನ್ನು ಸಹ ರೆಸ್ಟೋರೆಂಟ್ ಬಹಿರಂಗಪಡಿಸಿದೆ. ಚಿಪ್ಪರ್‌ಬೆಕ್ ಆಲೂಗಡ್ಡೆಗಳೊಂದಿಗೆ, ಉಬ್ರಾನಿ ಬೇಸಿಗೆ ಟ್ರಫಲ್ ಎಣ್ಣೆಯಲ್ಲಿ ಭಕ್ಷ್ಯವನ್ನು ಹುರಿಯಲಾಗುತ್ತದೆ ಎಂದು ಅದು ಹೇಳಿದೆ.