ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ರಾಜಧಾನಿ ಬೆಂಗಳೂರು ಸಜ್ಜುಗೊಂಡಿದೆ. ಭದ್ರತೆಗಾಗಿ 8,500 ಪೊಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸಿಸಿ ಟಿವಿ, ಡ್ರೋಣ್ ಕಣ್ಗಾವಲು ಹಾಕಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿನ ಹಲವೆಡೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಇಂದು ಮಧ್ಯ ರಾತ್ರಿ ಬಳಿಕ ಎಂ.ಜಿ. ರಸ್ತೆಯಿಂದ ಹಲಸೂರು ಕಡೆ ಹೋಗುವವರು ಅನಿಲ್ ಕುಂಬ್ಳೆ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸೆಂಟ್ರಲ್ ಸ್ಟ್ರೀಟ್ ಬಿ ಆರ್ ವಿ ಜಂಕ್ಷನ್ ಬಲ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕವಾಗಿ ವೆಬ್ಸ್ ಜಂಕ್ಷನ್ ಮೂಲಕ ಸಾಗಬೇಕು.
ಹಲಸೂರಿನಿಂದ ಕಂಟೋನ್ಮೆಂಟ್ ಕಡೆ ಸಾಗುವವರು ನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ ಡಿಕನ್ಸನ್ ರಸ್ತೆ ಮಾರ್ಗವಾಗಿ ಕಬ್ಬನ್ ರಸ್ತೆ ಮೂಲಕ ಸಂಚಾರ ಮಾಡಬೇಕು.
ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗಲು ಮಾತ್ರ ಅವಕಾಶ ಇದೆ. ಈ ದಿಕ್ಕಿನಲ್ಲಿ ಒನ್ ವೇ ಮಾತ್ರ ಹೋಗಲು ಅವಕಾಶ ನೀಡಲಾಗಿದೆ.
ಕಬ್ಬನ್ ರಸ್ತೆ ಜಂಕ್ಷನ್ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೂ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ. ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿಯೂ ವಾಹನ ನಿಲುಗಡೆ ಮಾಡಬಹುದು.